ಬೆಳಗಾವಿ : ಬಿಜೆಪಿ ಕಾರ್ಯಕರ್ತ ಹಾಗೂ ರಮೇಶ್ ಜಾರಕಿಹೊಳಿ ಆಪ್ತ ಪೃಥ್ವಿ ಸಿಂಗ್ ಬಳಿ ನನ್ನ ಸಹಚರರು ಹೋಗಿದ್ದು ನಿಜ ಹಾಗೂ ದಾಖಲೆಯನ್ನು ಕೇಳಿದ್ದು ನಿಜ. ಆದರೆ, ಹಲ್ಲೆಗೂ ನಮಗೂ ಸಂಬಂಧ ಇಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಮತ್ತು ವಿಧಾನಪರಿಷತ್ ಸದಸ್ಯ ಚೆನ್ನರಾಜ ಹಟ್ಟಿಹೊಳಿ ಸ್ಪಷ್ಟನೆ ನೀಡಿದರು.
ಬೆಳಗಾವಿ ಸುವರ್ಣಸೌಧದಲ್ಲಿ ಮಾತನಾಡಿ, ಯಾರು ಹಲ್ಲೆ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ಆಗಲಿ. ಆ ವ್ಯಕ್ತಿ ಸುಳ್ಳು ಹೇಳುತ್ತಿದ್ದಾನೆ. ಇದನ್ನು ನಾನು ನೇರವಾಗಿ ಹೇಳುತ್ತೇನೆ. ತನಿಖೆಯಿಂದ ಸತ್ಯ ಹೊರಬರಲಿ ಎಂದರು.ನನ್ನ ಸಹಚರರು ಹೋಗಿದ್ದು ನಿಜ, ದಾಖಲೆಯೊಂದು ಕೇಳಿದ್ದು ನಿಜ. ದಾಖಲೆಯನ್ನು ಕೊಡುತ್ತೇನೆ ಎಂದು ಆತ ಕರೆದಿದ್ದೂ ನಿಜ. ನಮ್ಮವರನ್ನು ಕರೆದು ವಾಪಸ್ ಕಳಿಸಿದ ಮೇಲೆ ಸೀನ್ ಏಕೆ ಕ್ರಿಯೇಟ್ ಮಾಡಿದ್ದಾನೆ? ಎಂದು ಪ್ರಶ್ನಿಸಿದರು.ಆದಷ್ಟು ಬೇಗ ತನಿಖೆ ಆಗಲಿ, ಎಲ್ಲಾ ರೀತಿಯಲ್ಲಿ ಸಹಕಾರ ಕೊಡುತ್ತೇನೆ. ತನಿಖಾ ವರದಿಯಲ್ಲಿ ಏನು ಬರುತ್ತದೆ ಎಂದು ನೋಡೋಣ. ಸ್ವಂತ ಅವನೇ ಮಾಡಿಕೊಂಡ ಗಾಯನೋ ಅಥವಾ ಬೇರೆಯವರು ಮಾಡಿದ್ದೋ ಎಂದು ತನಿಖೆಯಿಂದ ಗೊತ್ತಾಗಲಿದೆ ಎಂದು ಹೇಳಿದರು.
ಈ ಘಟನೆಯ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಚೂರಿ ಇರಿತ ಆಗಿದೆ ಎನ್ನುತ್ತಾರೆ. ಆದರೆ ಆತ ಧರಿಸಿದ ಬಟ್ಟೆ ಹರಿದಿಲ್ಲ. ಯಾರಾದರೂ ಹಲ್ಲೆ ಮಾಡಲು ಅಧಿಕೃತ ಪಿಎ ಯನ್ನು ಕಳಿಸ್ತಾರಾ? ಒಂದು ಗಂಟೆಯ ಬಳಿಕ ಏನು ಸೃಷ್ಟಿ ಮಾಡಿದ್ದಾನೆ ಎಂದು ತನಿಖೆಯಿಂದ ಹೊರಬರಲಿ ಎಂದರು.ಎಲ್ಲರಿಗೂ ಒಂದೇ ಕಾನೂನು, ಇಲಾಖೆ ತನಿಖೆಗೆ ನಾನು ಸಂಪೂರ್ಣ ಸಹಕಾರ ಕೊಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.