ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ನಾನು ಈಗಾಗಲೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ನನಗೆ 80 ವಯಸ್ಸಾಗ್ತಿದೆ ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S YEDIURAPPA) ಹೇಳಿದ್ದಾರೆ.
ಬೆಳಗಾವಿ(BELGAVI)ಯಲ್ಲಿ ಮಾತನಾಡಿದ ಅವರು, ಪಕ್ಷ ಕಟ್ಟಲು ರಾಜ್ಯದ ಉದ್ದಗಲಕ್ಕೂ ನಾನು ಪ್ರವಾಸ ಮಾಡುತ್ತೇನೆ. ಬಿ.ವೈ.ವಿಜಯೇಂದ್ರ ಕೂಡ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಪುತ್ರ ವಿಜಯೇಂದ್ರ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತಾರೆ. ವಿಜಯೇಂದ್ರ ಜೊತೆ ನಾನು ಓಡಾಡುತ್ತಿದ್ದೇನೆ. ನಾನೇನು ರಾಜಕೀಯ ನಿವೃತ್ತಿ ಪಡೆದಿಲ್ಲ. ದೇವರು ಶಕ್ತಿ ನೀಡಿದರೇ ಮುಂದಿನ ಚುನಾವಣೆಯಲ್ಲೂ ಓಡಾಡುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ (BJP)ಅಧಿಕಾರಕ್ಕೆ ತರಲು ಪ್ರಯತ್ನಿಸುವೆ. ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿ ಆಗಿದ್ದಾಗ ನನ್ನನ್ನು ಕೇಂದ್ರಕ್ಕೆ ಆಹ್ವಾನಿಸಿದ್ದರು. ಪಕ್ಷ ರಾಜ್ಯದಲ್ಲಿ ನನಗೆ ಎಲ್ಲ ಸ್ಥಾನಮಾನ, ಅಧಿಕಾರ, ಗೌರವ ನೀಡಿದೆ. ಋಣ ತೀರಿಸುವ ಜವಾಬ್ದಾರಿ ನನ್ನದು, ರಾಜ್ಯಾದ್ಯಂತ ಸಂಚರಿಸುತ್ತೇನೆ ಎಂದು ತಿಳಿಸಿದರು. ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್ಗಾಗಿ ಪೈಪೋಟಿ ನಡೆದಿರುವ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ರಚಿಸುವ ಪಕ್ಷಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳವಾಗಿರುತ್ತೆ. ಗೆಲ್ಲುವ ಹಾಗೂ ಸರ್ಕಾರ ರಚಿಸುವ ಪಕ್ಷಕ್ಕೆ ಆಕಾಂಕ್ಷಿಗಳ ಸಂಖ್ಯೆ ಬಹಳಷ್ಟು ಇರುತ್ತದೆ. ನಾವೆಲ್ಲರೂ ಚರ್ಚಿಸಿ ಯೋಗ್ಯ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ. ಒಂದಲ್ಲ, 2 ಸರ್ವೆ ಮಾಡಿಸಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡುತ್ತೇವೆ. ಟಿಕೆಟ್ ವಿಚಾರದಲ್ಲಿ ನಾವು ಯಾವುದೇ ಕಾಂಪ್ರಮೈಸ್ ಆಗಲ್ಲ. ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕುತ್ತೇವೆ ಎಂದು ಸ್ಪಷ್ಟನೆ ನೀಡಿದರು.
ಇದನ್ನು ಓದಿ :- ಇತಿಹಾಸದಲ್ಲೇ ಮೊದಲ ಬಾರಿಗೆ ಬಿಎಂಟಿಸಿ ಚಾಲಕನಿಂದ ರಾಜ್ಯಪಾಲರಿಗೆ ಪತ್ರ…!