“ಬಿಜೆಪಿ ಟಿಕೆಟ್ ವಿಚಾರ ಬಿಎಸ್ ಯಡಿಯೂರಪ್ಪನವರ ಕಿಚನ್ ನಲ್ಲಿ ಆಗೋದಿಲ್ಲ”. “ಯಾರ್ ರೀ ವಿಜಯೇಂದ್ರ ? ಅವರ ವಯಸ್ಸು ಮತ್ತು ನನ್ನ ವಯಸ್ಸು ಎಷ್ಟು ? ನನ್ನ ಯಾಕೆ ಅವರಿಗೆ ಹೋಲಿಕೆ ಮಾಡ್ತೀರಾ”. ಇದು ರಾಜ್ಯ ಬಿಜೆಪಿಯ ಇಬ್ಬರ ನಾಯಕ ಇತ್ತೀಚಿನ ಹೇಳಿಕೆಗಳು.. ಈ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಹಾಗೇ ರಾಜ್ಯ ಬಿಜೆಪಿಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ರಾಜ್ಯ ಕೇಸರಿ ಪಡೆಯಲ್ಲಿ ಎಲ್ಲವೂ ಸರಿಯಿಲ್ಲ, ಅದರಲ್ಲೂ ಬಿಎಸ್ ವೈ ಮತ್ತು ಅವರ ಪುತ್ರನನ್ನ ಟಾರ್ಗೆಟ್ ಅಥವಾ ಕಡೆಗಣಿಸುವ ಪ್ರಯತ್ನ ಮಾಡಲಾಗ್ತಿದೆ ಅಂತಾ ಅಂದಾಜಿಸಲಾಗಿತ್ತು. ಜೊತೆಗೆ ಯಡಿಯೂರಪ್ಪ ಹೆಸರಿಲ್ಲದೇ ಈ ಚುನಾವಣೆಯಲ್ಲಿ ಎದುರಿಸೋಣ ಅನ್ನೋದು ಬಿಎಸ್ ವೈ ವಿರೋಧಿಗಳ ಪ್ಲಾನ್ ಆಗಿತ್ತು. ಅದೇ ರೀತಿಯ ಚಟುವಟಿಕೆಗಳು ಕೂಡ ಗರಿಗೆದರಿದ್ದವು.. ಈ ವಿಚಾರ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾವೇರುತ್ತಲೇ ಇತ್ತು. ಈ ನಡುವೆ ಬಿಜೆಪಿಯ ನಂಬರ್ ಟು ಲೀಡರ್ ಅಮಿತ್ ಶಾ ಬೆಂಗಳೂರಲ್ಲಿ ದೊಡ್ಡ ಸಂದೇಶವನ್ನು ರವಾನಿಸಿದ್ದಾರೆ.
ಹೌದು..! ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಉಪಹಾರಕ್ಕೆ ಹೋಗಿದ್ದರು. ಅಮಿತ್ ಶಾ ಕಾರು ಇಳಿಯುತ್ತಿದ್ದಂತೆ ಬಿಎಸ್ ವೈ ಹೂಗುಚ್ಛ ಕೊಟ್ಟು ಸ್ವಾಗತಿಸಲು ಮುಂದಾದರು. ಆಗ ಅಮಿತ್ ಶಾ ನಗುತ್ತಲೇ ವಿಜಯೇಂದ್ರ ಕಡೆಗೆ ಕೈ ತೋರಿಸುತ್ತಾ ವಿಜಯೇಂದ್ರಗೆ ಕೊಡಿ ವಿಜಯೇಂದ್ರಗೆ ಕೊಡಿ ಅಂತಾ ಹೇಳಿದ್ರು. ಅಲ್ಲದೇ ಹೂಗುಚ್ಚ ಹಿಡಿದು ಹತ್ತಿರ ಬಂದ ವಿಜಯೇಂದ್ರ ಹೆಗಲ ಮೇಲೆ ಕೈ ಹಾಕಿದರು. ಅಲ್ಲಿಗೆ ಕೇಂದ್ರ ಗೃಹ ಸಚಿವ, ಬಿಜೆಪಿಯ ಚಾಣಕ್ಯ ರಾಜ್ಯ ಬಿಜೆಪಿಗೆ ಒಂದು ಸ್ಪಷ್ಟ ಸಂದೇಶವನ್ನು ರವಾನೆ ಮಾಡಿದ್ದಾರೆ.
ಅದು ಏನಂದ್ರೆ ರಾಜ್ಯದಲ್ಲಿ ಯಾರು ಏನೇ ಹೇಳಿದ್ರೂ ಬಿ.ಎಸ್.ಯಡಿಯೂರಪ್ಪ ಅವರೇ ರಾಜ್ಯ ಬಿಜೆಪಿಗೆ ಬಿಗ್ ಬಾಸ್.. ಅವರ ನಂತರ ಆ ಸ್ಥಾನಕ್ಕೆ ಬಿ.ವೈ. ವಿಜಯೇಂದ್ರ ಅವರೇ ಉತ್ತರಾಧಿಕಾರಿ.. ಮುಂದೆ ರಾಜ್ಯದಲ್ಲಿ ಪಕ್ಷವನ್ನ ಗಟ್ಟಿಗೊಳಿಸಲು ವಿಜಯೇಂದ್ರ ಸೂಕ್ತ ವ್ಯಕ್ತಿ.. ಅವರಿಗೆ ತಮ್ಮ ಬೆಂಬಲವಿದೆ ಅನ್ನೋದನ್ನ ಸಾರಿದ್ದಾರೆ. ಅಲ್ಲದೇ ಮುಂದಿನ ಚುನಾವಣೆಗಳಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತರಬೇಕು ಅಂದ್ರೆ ವಿಜಯೇಂದ್ರ ಅವರನ್ನ ಮುಂಚೂಣಿಗೆ ತರಬೇಕಾದ ಅವಶ್ಯಕತೆ ಇದೆ ಅನ್ನೋದನ್ನ ಸ್ವತಃ ಅಮಿತ್ ಶಾ ಪ್ರತಿಪಾದಿಸಿದಂತಿದೆ..
ಅಲ್ಲಿಗೆ ರಾಜ್ಯದಲ್ಲಿ ಇನ್ಮುಂದೆ ಬಿ.ಎಸ್. ಯಡಿಯೂರಪ್ಪ ಅಂಡ್ ಸನ್ ಜಲ್ವಾ ನಡೆಯುವ ಸಾಧ್ಯತೆಗಳಿವೆ.