ಅದಾನಿ ಸಮೂಹದಲ್ಲಿ (Adani Group) ಅವ್ಯವಹಾರ ನಡೆದಿರುವ ಶಂಕೆಯಿದೆ ಎನ್ನುವ ಹಿಂಡನ್ಬರ್ಗ್ ವರದಿ ಸಂಸತ್ತಿನಲ್ಲಿ ಇಂದು ಪ್ರತಿಧ್ವನಿಸಿತು. ಪ್ರತಿಪಕ್ಷಗಳ ಸದಸ್ಯರು ಅದಾನಿ ವಿರೋಧಿ ಘೋಷಣೆಗಳನ್ನು ಮೊಳಗಿಸಿದ ಹಿನ್ನೆಲೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸದನದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಬೇಕೆನ್ನುವ ಮನವಿಗೆ ಪ್ರತಿಪಕ್ಷಗಳ ಸದಸ್ಯರು ಸ್ಪಂದಿಸದ ಹಿನ್ನೆಲೆಯಲ್ಲಿ ರಾಜ್ಯಸಭೆಯ ಸಭಾಧ್ಯಕ್ಷ ಜಗದೀಪ್ ಧನಕರ್ ಸದನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿದರು. ಲೋಕಸಭೆ(lokasabe)ಯಲ್ಲಿಯೂ ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಸದನವನ್ನು ಮುಂದೂಡಲಾಯಿತು.
ಅದಾನಿ ಗ್ರೂಪ್ ಅವ್ಯವಹಾರದಿಂದ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (LIC) ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ಗೆ (SBI) ಹೆಚ್ಚು ನಷ್ಟವಾಗಿದೆ. ಅವ್ಯವಹಾರದ ತನಿಖೆಗಾಗಿ ಜಂಟಿ ಸದನ ಸಮಿತಿ ರಚಿಸಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ.
ಲಂಗಾಣದ ಬಿಆರ್ಎಸ್ ಸಂಸದ ಕೆ.ಕೇಶವ ರಾವ್ ರಾಜ್ಯಸಭೆಯಲ್ಲಿ ನಿಯಮ 267ರ ಅಡಿಯಲ್ಲಿ ಅದಾನಿ ಗ್ರೂಪ್ ಕುರಿತು ಹಿಂಡನ್ಬರ್ಗ್ ನೀಡಿರುವ ವರದಿಯ ಬಗ್ಗೆ ಚರ್ಚೆಗೆ ಅವಕಾಶ ಕೋರಿ ನಿಲುವಳಿ ಮಂಡಿಸಿದರು.
ಕಲಾಪಕ್ಕೂ ಮುನ್ನ ಸಂಸತ್ ಭವನದ ಎದುರು ಇರುವ ಗಾಂಧಿ ಪ್ರತಿಮೆ ಸಮೀಪ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಅದಾನಿ ಗ್ರೂಪ್ ಅವ್ಯವಹಾರದ ಬಗ್ಗೆ ಜಂಟಿ ಸದನ ಸಮಿತಿ ರಚಿಸಬೇಕು ಅಥವಾ ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು. ಇದನ್ನೂ ಓದಿ- ಅದಾನಿ ಷೇರು ಕುಸಿತದಿಂದ ದೇಶಕ್ಕೆ ಯಾವುದೇ ನಷ್ಟ ಇಲ್ಲ – ಪಿಯೂಷ್ ಗೋಯಲ್