ಶಿವಸೇನೆ ನಾಯಕ ಏಕನಾಥ್ ಶಿಂಧೆ ಸಾರಥ್ಯದಲ್ಲಿ ಸುಮಾರು 50 ಶಾಸಕರು ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ (UDHAV THCACKERY) ನೇತೃತ್ವದ ಮಹಾರಾಷ್ಟ್ರ ಸರ್ಕಾರ, ಹಲವು ನಗರಗಳ ಹೆಸರು ಬದಲಿಸಿದೆ. ಮಹಾರಾಷ್ಟ್ರದ ಹಲವು ನಗರಗಳು, ರಸ್ತೆ, ಏರ್ಪೋರ್ಟ್ಗಳ ಹೆಸರು ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ.
ಮಹಾರಾಷ್ಟ್ರ ಸರ್ಕಾರದ ಸಂಪುಟ ಸಭೆಯಲ್ಲಿ ಮಹಾರಾಷ್ಟ್ರ ರಾಜ್ಯದ ಹಲವು ಪ್ರಮುಖ ನಗರಗಳ ಹೆಸರನ್ನು ಬದಲಾವಣೆ ಮಾಡಲಾಗಿದೆ. ಔರಂಗಾಬಾದ್ ನಗರದ ಹೆಸರನ್ನು ಸಂಭಾಜಿ ನಗರ ಎಂದು ಬದಲಾವಣೆ ಮಾಡಲಾಗಿದೆ. ಒಸ್ಮಾನಾಬಾದ್ ನಗರದ ಹೆಸರನ್ನು ಧಾರಾಶಿವ್ ಎಂದು ಮರು ನಾಮಕರಣ ಮಾಡಲು ನಿರ್ಧರಿಸಲಾಗಿದೆ. ನವಿ ಮುಂಬೈ ವಿಮಾನ ನಿಲ್ದಾಣದ ಹೆಸರನ್ನು ಡಿ. ಬಿ. ಪಾಟೀಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಬದಲಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ.
ಇನ್ನು ಮಹಾರಾಷ್ಟ್ರ ರಾಜ್ಯದ ಪುಣೆ ನಗರದ ಹೆಸರನ್ನು ಜಿಜಾನಗರ ಎಂದು ಮರು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ- ಆಗಸ್ಟ್ 6 ರಂದು ಉಪರಾಷ್ಟ್ರಪತಿ ಚುನಾವಣೆ – ಚುನಾವಣಾ ಆಯೋಗ ಘೋಷಣೆ
ಸಂಪುಟ ಸಭೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಸಚಿವರೂ ಕೂಡಾ ಕೆಲವು ಹೆಸರುಗಳ ಬದಲಾವಣೆಗೆ ಒತ್ತಾಯಿಸಿದ್ದರು. ಅದರಂತೆ, ಶಿವ್ಡಿ ನವಾ ಶಾವೆ ಟ್ರಾನ್ಸ್ ಹಾರ್ಬರ್ ಲಿಂಕ್ ರಸ್ತೆ ಹೆಸರನ್ನು ಬ್ಯಾರಿಸ್ಟರ್ ಎ. ಆರ್. ಎಂದು ಮರು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ.
ಸಂಪುಟ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ನಾಳೆ ವಿಶ್ವಾಸಮತ ಸಾಬೀತು ಮಾಡುವ ವಿಶ್ವಾಸ ವ್ಯಕ್ತಪಡಿಸಿದರು. ಜೊತೆಯಲ್ಲೇ ತಮಗೆ ತಮ್ಮವರಿಂದಲೇ ದ್ರೋಹವಾಗಿದೆ ಎಂದು ಹೇಳಿದ್ರು. ತಮ್ಮಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದು ತಿಳಿಸಿದ್ರು.
ಉದ್ಧವ್ ಠಾಕ್ರೆ ಅವರ ಈ ಮಾತುಗಳು ನಿರ್ಗಮನ ಭಾಷಣದಂತಿತ್ತು. ಮೂಲಗಳ ಪ್ರಕಾರ ಉದ್ಧವ್ ಠಾಕ್ರೆ ವಿಶ್ವಾಸ ಮತಯಾಚನೆಗೂ ಮುನ್ನ ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ- ಮದರಸಾಗಳಲ್ಲಿ ತಲೆ ಕತ್ತರಿಸುವುದನ್ನು ಕಲಿಸಲಾಗುತ್ತಿದೆ- ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಗಂಭೀರ ಆರೋಪ