ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ (Arun singh) ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda patil yatnal) ಮಂಗಳವಾರ ರಾತ್ರಿ ರಹಸ್ಯ ಮಾತುಕತೆ ನಡೆಸಿದ್ದು ತೀವ್ರ ಕುತೂಹಲ ಮೂಡಿಸಿದೆ. ವಿಜಯಪುರ ಪ್ರವಾಸದಲ್ಲಿರುವ ಅರುಣ್ ಸಿಂಗ್ ಯತ್ನಾಳ್ ಅವರನ್ನು ಭೇಟಿ ಮಾಡಿ 15 ನಿಮಿಷ ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ.
ನಗರದ ಹೊರ ಭಾಗದಲ್ಲಿರುವ ಯತ್ನಾಳ ಮಾಲೀಕತ್ವದ ಹೈಪರ್ ಮಾರ್ಟ್ ನಲ್ಲಿ ಈ ರಹಸ್ಯ ಸಭೆ ನಡೆದಿದೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಬಿಜೆಪಿ ಸಂಕಲ್ಪ ಯಾತ್ರೆಯ ಪ್ರಯುಕ್ತ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಜಯಪುರ ಜಿಲ್ಲೆಗೆ ಅರುಣ್ ಸಿಂಗ್ ಬರುವ ವಿಚಾರ ಗೊತ್ತಿದ್ದರೂ ಯತ್ನಾಳ್ ಗೈರಾಗಿದ್ದು, ಅರುಣ್ ಸಿಂಗ್ ಅವರನ್ನು ಕೊಂಚ ವಿಚಲಿತರನ್ನಾಗಿ ಮಾಡಿತ್ತು. ರಾಜ್ಯ ಉಸ್ತುವಾರಿ ಬಂದರೆ ಸಿಎಂ ಸಚಿವರು ಬಂದು ಸ್ವಾಗತಿಸಿ ಕುಶಲೋಪರಿ ವಿಚಾರಿಸುವುದು ಸಂಪ್ರದಾಯವಾಗಿದೆ. ಆದರೆ, ತಮ್ಮ ತವರು ಜಿಲ್ಲೆ ವಿಜಯಪುರಕ್ಕೆ ಬಂದರೂ ಯತ್ನಾಳ್ ಅರುಣ್ ಸಿಂಗ್ ಅವರನ್ನು ಭೇಟಿ ಮಾಡದೇ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅಂತರ ಕಾಯ್ದುಕೊಂಡಿದ್ದರು. ಯತ್ನಾಳ್ ಗೈರಿನಿಂದ ಉಂಟಾಗಬಹುದಾದ ಗೊಂದಲ ಮತ್ತು ಹೋಗಬಹುದಾದ ತಪ್ಪು ಸಂದೇಶದ ಬಗ್ಗೆ ಜಾಗೃತರಾದ ಅರುಣಸಿಂಗ್ ಇಂಡಿಯಿಂದ ನೇರವಾಗಿ ವಿಜಯಪುರಕ್ಕೆ ಆಗಮಿಸಿ ಯತ್ನಾಳ್ ಅವರನ್ನು ಭೇಟಿ ಮಾಡಿದ್ದಾರೆ.
ಇದನ್ನೂ ಓದಿ : – ಡಿ.ಕೆ ಶಿವಕುಮಾರ್ ಗೆ ತಾಕತ್ ಇದ್ರೆ ಸತೀಶ್ ಜಾರಕಿಹೊಳಿಯನ್ನ ಪಕ್ಷದಿಂದ ಹೊರಗೆ ಹಾಕಲಿ – ಆರಗ ಜ್ಞಾನೇಂದ್ರ