ಕರ್ನಾಟಕ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ (Congress) ಹಿರಿಯ ನಾಯಕ, ಮಾಜಿ ಸಚಿವ ಎಂ.ಬಿ ಪಾಟೀಲ್ (M.B.patil) ಇಂದು ಅಧಿಕಾರ ಸ್ವೀಕರಿಸಲಿದ್ದಾರೆ. ವಿಧಾನಸಭಾ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇರುವಂತೆ ಕಾಂಗ್ರೆಸ್ ಈ ನಿರ್ಧಾರ ಕೈಗೊಂಡಿದ್ದು ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹ ಮೂಡಿಸಿದೆ.
ಎಂ.ಬಿ ಪಾಟೀಲ್ (ಮಲ್ಲನಗೌಡ ಬಸನಗೌಡ ಪಾಟೀಲ) ಈ ಹಿಂದೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿ ಕೆಲಸ ಮಾಡಿದ್ದರು. ಹೆಚ್.ಡಿ ಕುಮಾರಸ್ವಾಮಿ ಸಂಪುಟದಲ್ಲಿ ಗೃಹ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ತಮ್ಮ 27ನೇ ವಯಸ್ಸಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ ಎಂ.ಬಿ. ಪಾಟೀಲ್ ಲೋಕಸಭೆ ಸದಸ್ಯರಾಗಿಯೂ ಆಯ್ಕೆ ಆಗಿದ್ದರು. 2008, 2013, 2018 ರಲ್ಲಿ ಸತತ ಮೂರು ಬಾರಿ ವಿಜಯಪುರದ ಬಬಲೇಶ್ವರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿರುವ ಪಾಟೀಲ್ಗೆ ಲೋಕಸಭೆ, ವಿಧಾನಸಭೆ ಹಾಗೂ ಸಚಿವ ಸ್ಥಾನದ ಜವಾಬ್ದಾರಿ ವಹಿಸಿರುವ ಅನುಭವವೂ ಇದೆ. ಉದ್ಯಮಿಯೂ ಆಗಿರುವ ಇವರು ವಿಜಯಪುರ ಭಾಗದಲ್ಲಿ ಪ್ರಭಾವಿ ಧುರೀಣರಾಗಿ ಗುರುತಿಸಿಕೊಂಡಿದ್ದಾರೆ. ಪ್ರಬಲ ಲಿಂಗಾಯತ ಮುಖಂಡರು ಹೌದು.
ರಾಜ್ಯ ಕಾಂಗ್ರೆಸ್ ನಲ್ಲಿ ಕೆಪಿಸಿಸಿ (KPCC) ಅಧ್ಯಕ್ಷರಾಗಿ ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್ ಇದ್ದಾರೆ. ಕೆಪಿಸಿಸಿ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್, ರಾಮಲಿಂಗಾ ರೆಡ್ಡಿ, ಆರ್. ಧ್ರುವನಾರಾಯಣ ಇದ್ದಾರೆ. ವೋಟ್ ಬ್ಯಾಂಕ್, ಜಾತಿ ಲೆಕ್ಕಾಚಾರದಂತೆ ಕಾಂಗ್ರೆಸ್ ಪಕ್ಷ, ಲಿಂಗಾಯತ ಸಮುದಾಯದ ಎಂ.ಬಿ ಪಾಟೀಲ್ಗೆ ಪ್ರಚಾರ ಸಮಿತಿ ನೇತೃತ್ವ ನೀಡಿದೆ.
ಅಂದ ಹಾಗೆ ಸಿದ್ದರಾಮಯ್ಯ (Siddaramaiah) ಸಿಎಂ ಆಗಿದ್ದ ಕಾಲದಲ್ಲಿ ವೀರಶೈವ-ಲಿಂಗಾಯತ ವಿವಾದವನ್ನು ಎಂ.ಬಿ. ಪಾಟೀಲ್ ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದರು ಎಂಬುದು ರಹಸ್ಯದ ಸಂಗತಿ ಏನಲ್ಲ. ಹಾಗೆಯೇ ವೀರಶೈವರು ಬೇರೆ, ಲಿಂಗಾಯತರು ಬೇರೆ ಎಂದು ಪ್ರತಿಪಾದಿಸುವ ವಿಷಯದಲ್ಲಿ ಎಂ.ಬಿ.ಪಾಟೀಲರು ತೋರಿದ ಜೋಷ್ ಗೂ ಒಂದು ಕಾರಣವಿತ್ತು. ಅದುವೇ ಕರ್ನಾಟಕದ ಸಿಎಂ ಹುದ್ದೆಗೇರಬೇಕು. ತಮಗೆ ಒಂದು ಪ್ರಬಲ ಸಮುದಾಯದ ಬೆಂಬಲ ರಕ್ಷೆಯಾಗಿರಬೇಕು ಎಂಬುದು. ಈಗಲೂ ಕಾಂಗ್ರೆಸ್ ನ ಎಂ ಆಕಾಂಕ್ಷಿಗಳಲ್ಲಿ ಇವರು ಒಬ್ಬರು.
ಆದ್ರೆ ಎಂ. ಬಿ ಪಾಟೀಲ್ ಅವರ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಕಾಂಗ್ರೆಸ್ ಪಕ್ಷಕ್ಕೆ ಲಾಭಕ್ಕಿಂತ ಹೆಚ್ಚು ನಷ್ಠವನ್ನುಂಟು ಮಾಡಿತು. ಇದೇ ವಿಚಾರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಕಾರಣ ಎಂಬುದು ಕಾಂಗ್ರೆಸ್ ಗೆ ಮನವರಿಕೆ ಆಗಿತ್ತು. ಇದೇ ಎಂ ಬಿ ಪಾಟೀಲರಿಗೆ ಈಗ ಕಾಂಗ್ರೆಸ್ ಉನ್ನತ ಹುದ್ದೆ ನೀಡಿದೆ.
ಆದರೆ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಮಾಜಿ ಸಚಿವ ಎಂ.ಬಿ. ಪಾಟೀಲ್ ಈಗ ತಮ್ಮ ನಿಲುವು ಬದಲಿಸಿದ್ದಾರೆ. ಪ್ರತ್ಯೇಕ ಮಾತನ್ನು ಬಿಟ್ಟು, ಎಲ್ಲರೂ ಜೊತೆಯಾಗಿ ಹೋಗೋಣ ಎಂಬ ಮಾತನ್ನು ಅವರು ಆಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಕಾರಣ ಎನ್ನಲಾಗಿದೆ. ಈಗ ಎಂ ಬಿ ಪಾಟೀಲ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗಲೇಬೇಕಾಗಿದೆ.
ಒಟ್ಟಿನಲ್ಲಿ ಕಾಂಗ್ರೆಸ್ ಈ ಬಾರಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲೇಬೇಕು ಎಂಬ ಜೋಶ್ ನೊಂದಿಗೆ ಹಲವು ಬದಲಾವಣೆಗಳಿಗೆ ಮುನ್ನುಡಿ ಬರೆದಿದೆ. ಎಲ್ಲಾ ಜಾತಿ ಸಮುದಾಯದವರಿಗೆ ಮಣೆ ಹಾಕಿ ಮುಂಬರುವ ಚುನಾವಣೆ ಎದುರಿಸಲು ಸಜ್ಜಾಗಿದೆ.
ಇದನ್ನು ಓದಿ :- ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಇಂದು ಎಂ.ಬಿ.ಪಾಟೀಲ್ ಪದಗ್ರಹಣ