ಬಿಜೆಪಿ ಮುಖಂಡರಾದ ನೂಪುರ್ ಶರ್ಮಾ ( Nupur Sharma ) ಮೊಹಮ್ಮದ್ ಪೈಗಂಬರ್ ಬಗ್ಗೆ ನೀಡಿದ್ದ ಹೇಳಿಕೆಯ ಕಿಚ್ಚು ದೇಶವ್ಯಾಪಿ ಹಬ್ಬುತ್ತಿದೆ. ಮುಸ್ಲಿಂ ಸಮುದಾಯ ಬೀದಿಗಿಳಿದು ಪ್ರತಿಭಟನೆಗಳನ್ನು ಮಾಡಿ ನೂಪುರ್ ಶರ್ಮಾ ಬಂಧನಕ್ಕೆ ಆಗ್ರಹಿಸುತ್ತಿವೆ.
ಕೆಲವು ರಾಜ್ಯಗಳಲ್ಲಿ ಸಿಕ್ಕ ಸಿಕ್ಕ ವಸ್ತುಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸರ್ಕಾರವು ರಾಜ್ಯದಲ್ಲಿ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಬಿಜೆಪಿಯ ನಾಯಕಿ ನೂಪುರ್ ಶರ್ಮಾ ಖಾಸಗಿ ಸುದ್ದಿವಾಹಿಯ ಚರ್ಚೆಯ ಸಂದರ್ಭದಲ್ಲಿ ಮಹಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿಯಾದ ಹೇಳಿಕೆ ನೀಡಿರುವುದು ಮುಸ್ಲಿಂ ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಬಿಜೆಪಿ ನಾಯಕರ ಹೇಳಿಕೆಗೆ ವಿರೋಧ ಹಾಗೂ ಖಂಡನೆಗಳು ವ್ಯಕ್ತವಾಗುತ್ತಿವೆ.
ಉತ್ತರಪ್ರದೇಶ, ದೆಹಲಿ, ತೆಲಂಗಾಣ, ಮಹಾರಾಷ್ಟ್ರ ಸೊಲ್ಲಾಪುರ ಸೇರಿದಂತೆ ದೇಶದ ಹಲವೆಡೆ ಸಾವಿರಾರು ಮುಸ್ಲಿಂ ಸಮುದಾಯದ ಜನರು ನೂಪುರ್ ಶರ್ಮಾ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ : – ದೇಶದ ವಿವಿಧೆಡೆ ಹಿಂಸಾಚಾರ- ರಾಜ್ಯದಲ್ಲೂ ಕಟ್ಟೆಚ್ಚರ – ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ ತುರ್ತು ಸಭೆ
ದೇಶದಾದ್ಯಂತ ಪ್ರತಿಭಟನೆ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದು, ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದಾರೆ. ವಿಧಾನಸೌಧದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿಗಳು, ರಾಜ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡರು. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಶಾಂತಿ ಭಂಗ ಉಂಟಾಗದಂತೆ ಮುಂಜಾಗ್ರತೆ ವಹಿಸಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ : – ಒಂದು ವಾರದ ವರೆಗೂ ನಾನು ಯಾರನ್ನು ಭೇಟಿ ಮಾಡುವುದಿಲ್ಲ – ಕುಮಾರಸ್ವಾಮಿ