ಬರೋಬ್ಬರಿ 5 ವರ್ಷಗಳ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಾಣಿಸಿಕೊಂಡ ಆಲ್ರೌಂಡರ್ ರಿಷಿ ಧವನ್, ಪಂಜಾಬ್ ಕಿಂಗ್ಸ್ ಪರ ಇನಿಂಗ್ಸ್ನ ಕೊನೆಯ ಓವರ್ ಎಸೆದು ಎದುರಾಳಿ ತಂಡದ ಸ್ಟಾರ್ ಬ್ಯಾಟ್ಸ್ಮನ್ ಎಂಎಸ್ ಧೋನಿ ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಕೊಡುಗೆ ಸಲ್ಲಿಸಿದರು.
ಅಂದಹಾಗೆ ಹಿಮಾಚಲ ಪ್ರದೇಶ ಮೂಲದ ಆಲ್ರೌಂಡರ್ ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತಮ್ಮ ಆಟಕ್ಕಿಂತಲೂ ಮುಖಕ್ಕೆ ತೊಟ್ಟ ವಿಶೇಷ ರಕ್ಷಣಾ ಕವಚದ ಮೂಲಕವೇ ಹೆಚ್ಚು ಸುದ್ದಿಯಾಗಿದ್ದು ವಿಶೇಷ. ಪಂದ್ಯದಲ್ಲಿ 4 ಓವರ್ ಎಸೆದ ರಿಷಿ, 39 ರನ್ ಬಿಟ್ಟುಕೊಟ್ಟರೂ ಪ್ರಮುಖ 2 ವಿಕೆಟ್ಗಳನ್ನು ಕಿತ್ತರು. ಇದೇ ವರ್ಷ ರಣಜಿ ಟ್ರೋಫಿ ಕ್ರಿಕೆಟ್ ಆಡುವ ವೇಳೆ ಚೆಂಡು ಮುಖಕ್ಕೆ ಬಡಿದು ಮೂಗಿನ ಮೂಳೆ ಮುರಿದಿತ್ತು. ಇದನ್ನೂ ಓದಿ :- ಟ್ವಿಟರ್ ಖರೀದಿಸಿದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್
ಇದೇ ಕಾರಣಕ್ಕೆ ರಿಷಿ ಧವನ್ ಪಂಜಾಬ್ ಕಿಂಗ್ಸ್ ಪರ ಮೊದಲ ನಾಲ್ಕು ಪಂದ್ಯಗಳಿಂದ ಹೊರಗುಳಿಯುವಂತ್ತಾಗಿತ್ತು. ಈಗ ಪಂಜಾಬ್ ತಂಡ ಟೂರ್ನಿಯಲ್ಲಿ ನಾಕ್ಔಟ್ ರೇಸ್ನಲ್ಲಿ ಉಳಿಯುವ ಸಲುವಾಗಿ ತನ್ನ ಬೌಲಿಂಗ್ ಬಲ ಹೆಚ್ಚಿಸಿಕೊಳ್ಳಲು, ಅನುಭವಿ ಆಲ್ರೌಂಡರ್ಗೆ ಮಣೆ ಹಾಕಿತು. ಮುಖಕ್ಕೆ ಹೆಚ್ಚುವರಿ ರಕ್ಷಣೆ ಸಲುವಾಗಿ ವಿಶೇಷ ರಕ್ಷಣಾ ಕವಚ ತೊಟ್ಟು ಆಡಿದ ರಿಷಿ ಧವನ್, ಶಿವಂ ದುಬೇ ಮತ್ತು ಎಂಎಸ್ ಧೋನಿ ವಿಕೆಟ್ ಪಡೆದು ತಂಡವನ್ನು ಮತ್ತೆ ಗೆಲುವಿನ ಹಳಿಗೆ ಹಿಂದಿರುಗುವಂತೆ ಮಾಡಲು ನೆರವಾದರು. ರಿಷಿ ಧವನ್, 2016ರಲ್ಲಿ ಪಂಜಾಬ್ ಕಿಂಗ್ಸ್ ಪರ ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನಾಡಿದ್ದರು. ಈಗ ಪಂಜಾಬ್ ತಂಡದ ಮೂಲಕವೇ ಕಮ್ಬ್ಯಾಕ್ ಮಾಡಿದ್ದಾರೆ.
5 ವರ್ಷಗಳ ಬಳಿಕ ಐಪಿಎಲ್ಗೆ ಕಮ್ಬ್ಯಾಕ್ ಮಾಡುತ್ತಿದ್ದೇನೆ. ರಣಜಿ ಟ್ರೋಫಿಯಲ್ಲಿ ಗಾಯಗೊಂಡಾಗ ಬಹಳಾ ಬೇಸರವಾಗಿತ್ತು. ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದ ಕಾರಣ ಐಪಿಎಲ್ನ ಮೊದಲ 4 ಪಂದ್ಯಗಳಿಗೆ ಅಲಭ್ಯನಾಗಿದ್ದೆ. ಈಗ ಸಂಪೂರ್ಣ ಫಿಟ್ ಆಗಿದ್ದೇನೆ. ಕಠಿಣ ಅಭ್ಯಾಸ ಕೂಡ ನಡೆಸಿದ್ದ, ಉತ್ತಮ ಕಮ್ಬ್ಯಾಕ್ ಮಾಡುವುದನ್ನು ಎದುರು ನೋಡುತ್ತಿದ್ದೇನೆ ಎಂದು ಸಿಎಸ್ಕೆ ವಿರುದ್ಧದ ಪಂದ್ಯಕ್ಕೂ ಮುನ್ನ 32 ವರ್ಷದ ಆಲ್ರೌಂಡರ್ ರಿಷಿ ಧವನ್ ಹೇಳಿಕೊಂಡಿದ್ದರು.
ಇದನ್ನೂ ಓದಿ :- ರಾಣಾ ದಂಪತಿಗೆ ಹಿನ್ನಡೆ – ಎಫ್ ಐ ಆರ್ ರದ್ದುಗೊಳಿಸುವಂತೆ ಸಲ್ಲಿಕೆ ಮಾಡಿದ್ದ ಅರ್ಜಿ ವಜಾ