ದಕ್ಷಿಣ ಕಾಶ್ಮೀರದ ಅಮರನಾಥ (amarnath) ಗುಹಾ ದೇಗುಲದ ಬಳಿ ಸಂಭವಿಸಿದ ಸಾವುಗಳು ಮತ್ತು ಪ್ರವಾಹ ವಿನಾಶಕ್ಕೆ ಅತಿಯಾದ ಮಳೆ ಕಾರಣವೇ ಹೊರತು ಮೇಘಸ್ಫೋಟವಲ್ಲ ಎಂದು ಐಎಂಡಿ ತಿಳಿಸಿದೆ.
ವಿಜ್ಞಾನಿಗಳ ಪ್ರಕಾರ, ಶುಕ್ರವಾರ ಸಂಜೆ 4.30 ರಿಂದ 6.30 ರ ನಡುವೆ ದೇಗುಲದ ಆವರಣದಲ್ಲಿ 31 ಮಿಮೀ ಮಳೆಯಾಗಿದೆ. ಇದು ಮೋಡದ ಸ್ಫೋಟ ಎಂದು ವರ್ಗೀಕರಿಸಲು ಸಾಕಷ್ಟು ಕಡಿಮೆ ಪ್ರಮಾಣದ ಮಳೆಯಾಗಿದೆ. ಅಮರನಾಥ ಗುಹೆ ದೇಗುಲದ ಸಮೀಪವಿರುವ ಪರ್ವತಗಳ ಎತ್ತರದ ಪ್ರದೇಶಗಳಲ್ಲಿ ಮಳೆಯಿಂದಾಗಿ ಹಠಾತ್ ಪ್ರವಾಹ ಉಂಟಾಗಿರಬಹುದು.
ಹವಮಾನ ಇಲಾಖೆ ಪ್ರಕಾರ ಒಂದು ಗಂಟೆಯಲ್ಲಿ 100 ಮಿಮೀ ಮಳೆ ಬಂದರೆ ಇದನ್ನು ಮೇಘಸ್ಫೋಟ ಎಂದು ವರ್ಗೀಕರಿಸಲಾಗಿದೆ. ಅಮರನಾಥ ಗುಹಾ ದೇಗುಲದ ಮೇಲಿನ ಪ್ರದೇಶದಲ್ಲಿ ಸಂಜೆ 5.30 ರಿಂದ 6.30 ರ ನಡುವೆ 28 ಮಿಮೀ ಮಳೆಯಾಗಿದೆ. ಯಾತ್ರೆಗೆಂದು ತೆರಳುತ್ತಿದ್ದ ಸುಮಾರು 15,000 ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ. ಆದರೆ ಮೃತರ ಸಂಖ್ಯೆ 16ಕ್ಕೆ ಏರಿಕೆಯಾಗಿದ್ದು, ಇನ್ನೂ ಕನಿಷ್ಠ 40 ಮಂದಿ ನಾಪತ್ತೆಯಾಗಿದ್ದಾರೆ. ಭಾರತೀಯ ಸೇನೆ ನೇತೃತ್ವದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹಠಾತ್ತನೆ ಸುರಿದ ಭಾರಿ ಮಳೆಯ ಜತೆಗೆ ಉಂಟಾದ ದಿಢೀರ್ ಪ್ರವಾಹ ಅನೇಕ ಜನರನ್ನು ಕೊಚ್ಚಿಕೊಂಡು ಹೋಗಿದೆ. ಅನೇಕ ಟೆಂಟ್ಗಳು ನೀರುಪಾಲಾಗಿವೆ.