ತೀವ್ರ ಆತಂಕ ಸೃಷ್ಟಿಸಿರೋ ಮಂಗಳೂರು (Mangaluru) ನಿಗೂಢ ಸ್ಫೋಟ ಪ್ರಕರಣದ ತನಿಖೆಯು ಚುರುಕುಗೊಂಡಿದೆ. ಶಂಕಿತ ಉಗ್ರನ ಜಾಡು ಹಿಡಿದು ಬೆನ್ನತ್ತಿರೋ ಪೊಲೀಸರು (Police) ಅನೇಕ ಆಯಾಮಗಳಲ್ಲಿ ತನಿಖೆ ಮಾಡ್ತಿದ್ದಾರೆ. ಇದೀಗ ಮತ್ತೊಂದು ಭಯಾನಕ ಸತ್ಯ ಹೊರ ಬಂದಿದೆ. ಮಂಗಳೂರು ಸ್ಫೋಟಕ್ಕೂ ಸಾಂಸ್ಕೃತಿಕ ನಗರಿ ಮೈಸೂರಿಗೂ ನಂಟು ಇದೆ ಅನ್ನೋ ವಿಚಾರ ತಿಳಿದು ಬಂದಿದೆ.
ಮಂಗಳೂರಿನಲ್ಲಿ ನಡೆದಿರುವ ನಿಗೂಢ ಸ್ಪೋಟಕ್ಕೆ ಮೈಸೂರು ಮೂಲದ ನಂಟು ಇದೆ. ಮಂಗಳೂರಿನಲ್ಲಿ ಬಾಂಬ್ ಸ್ಪೋಟ ಮಾಡಿರುವ ಶಂಕಿತ ಉಗ್ರ ಮೈಸೂರಿನಲ್ಲಿ ನೆಲೆಸಿದ್ದ. ಮೈಸೂರಿ (Mysuru) ನ ಲೋಕ ನಾಯಕ ನಗರದ 10 ನೇ ಕ್ರಾಸ್ ನಲ್ಲಿರುವ ಮೋಹನ್ ಕುಮಾರ್ ಎಂಬುವರ ಮನೆಯನ್ನು ಬಾಡಿಗೆಗೆ ಮನೆ ಪಡೆದಿರುವ ಶಂಕಿತ ಉಗ್ರ, ಮಂಗಳೂರಿನಲ್ಲಿ ಈ ಕೃತ್ಯ ಎಸಗಿದ್ದಾನೆ. ಬಾಡಿಗೆ ಮನೆ (Rent house) ಅಗ್ರಿಮೆಂಟ್ ಗೆ ತುಮಕೂರು ಮೂಲದ ಪ್ರೇಮ್ ರಾಜ್ (Prem raj) ಎಂಬುವರ ಆಧಾರ್ ಕಾರ್ಡ್ ನೀಡಿದ್ದಾನೆ. ಶಂಕಿತ ಉಗ್ರ, ಸಾಕಷ್ಟು ದಿನ ಇಲ್ಲಿಯೇ ವಾಸವಿದ್ದ ಅನ್ನೋ ಮಾಹಿತಿ ಇದೆ. ಮಂಗಳೂರು ನಿಗೂಢ ಸ್ಫೋಟಕ್ಕೆ ಸಂಬಂಧಿಸಿದಂತೆ ಮೈಸೂರಲ್ಲಿ ಒಬ್ಬನನ್ನ ವಶಕ್ಕೆ ಪಡೆಯಲಾಗಿದೆ. ಶಂಕಿತ ಭಯೋತ್ಪಾದಕನಿಗೆ ಮೊಬೈಲ್ ನೀಡಿದ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮೇಟಗಳ್ಳಿ ಪೊಲೀಸರಿಂದ ಶಂಕಿತನ ಸ್ನೇಹಿತನನ್ನ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಮೈಸೂರಿಗೆ ಬಂದ ಮಂಗಳೂರು ಪೊಲೀಸರ ತಂಡ ಹಲವರನ್ನ ವಿಚಾರಣೆಗೊಳಪಡಿಸಿದೆ. ಮಂಗಳೂರು ಮತ್ತು ಮೈಸೂರು ಪೊಲೀಸರು ಜಂಟಿಯಾಗಿ ಶಂಕಿತನ ವಿಚಾರಣೆ ನಡೆಸುವ ವೇಳೆ ಮಹತ್ವದ ಮಾಹಿತಿ ಸಂಗ್ರಹವಾಗಿದೆ ಎನ್ನಲಾಗಿದೆ. 10ಕ್ಕೂ ಹೆಚ್ಚು ಮೊಬೈಲ್ ಗಳನ್ನ ಶಂಕಿತನಿಗೆ ನೀಡಿರುವುದಾಗಿ ಮಾಹಿತಿ ನೀಡಿದ್ದಾನೆ. ರೂಮ್ ಬಾಡಿಗೆ ಪಡೆಯುವ ವೇಳೆ ತಾನು ಹುಬ್ಬಳ್ಳಿಯವನು ಅಂತ ಸುಳ್ಳು ಹೇಳಿ ಮಾಲೀಕ ಮೋಹನ್ ಕುಮಾರ್ ಎಂಬುವವರಿಂದ ಶಂಕಿತ ಉಗ್ರ ರೂಮ್ ಬಾಡಿಗೆ ಪಡೆದಿದ್ದನು. ಇದ್ದಷ್ಟು ದಿನ ಯಾರಿಗೂ ಅನುಮಾನ ಬಾರದಂತೆ ಶಂಕಿತ ಚಾಣಾಕ್ಷನ ರೀತಿ ವರ್ತಿಸಿದ್ದಾನೆ ಎನ್ನಲಾಗುತ್ತಿದೆ. ಇದನ್ನೂ ಓದಿ :– ಮಂಗಳೂರಿನ ಬಾಂಬ್ ಪ್ರಕರಣಕ್ಕೂ ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ – ಪ್ರೇಮರಾಜ್
ಇನ್ನು, ಪೊಲೀಸರು ಸಿಂಗಲ್ ರೂಮ್ ಪರಿಶೀಲನೆ ವೇಳೆ ಸ್ಮಾಲ್ ಬೋಲ್ಟ್, ಸರ್ಕ್ಯೂಟ್ ಬೋರ್ಡ್, ಬ್ಯಾಟರಿ, ಮೊಬೈಲ್, ವೈರ್, ಮಿಕ್ಸರ್ ಜಾರ್ ಸೇರಿದಂತೆ ಇನ್ನೂ ಅನೇಕ ವಸ್ತುಗಳು ಪತ್ತೆಯಾಗಿದೆ ಅಂತ ಗೊತ್ತಾಗಿದೆ. ಹಾಗೆಯೇ ಎರಡು ನಕಲಿ ಆಧಾರ್ ಕಾರ್ಡ್ ಹಾಗೂ 1 ಪಾನ್ ಕಾರ್ಡ್ ಕೂಡ ಸಿಕ್ಕಿದೆ. ಹಾಗೆಯೇ ಸಂಭವಿಸಿರೋ ಸ್ಫೋಟದಲ್ಲಿ ಶಂಕಿತ ಉಗ್ರ 60% ಗಾಯಗೊಂಡಿದ್ದು, ಆತ ಬದುಕುಳಿಯೋದೇ ಅನುಮಾನ ಅಂತ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ :– ಗುಜರಾತ್ ಚುನಾವಣಾ ರ್ಯಾಲಿ ಆರಂಭಿಸುವ ಮುನ್ನ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಮೋದಿ