ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿನ ಕೆಲವು ಲೋಪದೋಷಗಳನ್ನು ಪರೋಕ್ಷವಾಗಿ ಒಪ್ಪಿಕೊಂಡಿರುವ ಸರಕಾರ, ಪರಿಷ್ಕೃತ ಪಠ್ಯದಲ್ಲೂ ಪರಿಷ್ಕರಣೆಗೆ ಸಹಮತ ವ್ಯಕ್ತಪಡಿಸಿದೆ. ಜತೆಗೆ, ರೋಹಿತ್ ಚಕ್ರತೀರ್ಥ ನೇತೃತ್ವದ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಿದೆ.
ಸದ್ಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಕಾರ್ಯ ಮುಗಿದಿರುವ ಹಿನ್ನೆಲೆಯಲ್ಲಿ ಸಮಿತಿಯನ್ನು ವಿಸರ್ಜಿಸಲಾಗಿದೆ. ಇದೇ ವೇಳೆ, ಹಳೇ ಪಠ್ಯಪುಸ್ತಕಗಳನ್ನು ಮುದ್ರಣ ಮಾಡಿ ನೀಡಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವಾನಿಸಿದ್ದಾರೆ. ವಿವಾದದ ಅಲೆಯನ್ನೇ ಎಬ್ಬಿಸಿದ್ದ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ನೀಡಿ ವರದಿ ಸಲ್ಲಿಸಿದರು. ಸುದೀರ್ಘ ಒಂದೂವರೆ ಗಂಟೆಗೂ ಹೆಚ್ಚಿನ ಕಾಲ ಚರ್ಚೆ ನಡೆದ ಸಭೆಯಲ್ಲಿ ಸ್ವವಿವರವಾಗಿ ವರದಿಯಲ್ಲಿರುವ ಅಂಶಗಳನ್ನು ಸಚಿವ ನಾಗೇಶ್ ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಟ್ಟರು.
ಪಂಡಿತಾರಾಧ್ಯ ಸ್ವಾಮೀಜಿಗಳು ಹಾಗೂ ನಾಡಿನ ಇತರೆ ಸ್ವಾಮೀಜಿಗಳು ಪ್ರಸ್ತುತ ಪಠ್ಯಪುಸ್ತಕದಲ್ಲಿರುವ ಬಸವಣ್ಣನವರ ವಿಷಯಾಂಶಕ್ಕೆ ಸಂಬಂಧಿಸಿದಂತೆ ಕೆಲವು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಬರಗೂರು ಸಮಿತಿಯಿಂದ ರಚಿತವಾದ ಪಠ್ಯಪುಸ್ತಕ ಹಾಗೂ ಪ್ರಸ್ತುತ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ಸಾಮಾನ್ಯವಾದ ಅಂಶಗಳಿವೆ. ಪ್ರಸ್ತುತ ಪಠ್ಯಪುಸ್ತಕದಲ್ಲಿರುವ ಬಸವಣ್ಣನವರ ವಿಷಯಕ್ಕೆ ಸಂಬಂಧಿಸಿ ಯಾರ ಭಾವನೆಗೂ ಧಕ್ಕೆಯಾಗದಂತೆ ಪರಿಷ್ಕರಿಸಲಾಗುವುದು ಎಂದು ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ. ಈ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ‘ಕುವೆಂಪು ಅವರ ಬಗ್ಗೆ ಅವಹೇಳನ ಮಾಡುವ ರೀತಿಯ ಅಂಶಗಳು ಪಠ್ಯಪುಸ್ತಕದಲ್ಲಿಲ್ಲ. ಆದರೂ, ಸಾಮಾಜಿಕ ಜಾಲತಾಣಗಳಲ್ಲಿ ನಾಡಗೀತೆಯ ಮೂಲ ಕವನ ತಿದ್ದಿ ಪೋಸ್ಟ್ ಮಾಡಿದ ವ್ಯಕ್ತಿಗಳ ಬಗ್ಗೆ ಕಾನೂನಾತ್ಮಕ ತನಿಖೆಯ ಕ್ರಮವನ್ನು ಸರಕಾರ ತೆಗೆದುಕೊಳ್ಳಲಿದೆ’ ಎಂಬ ಭರವಸೆಯನ್ನು ನೀಡಿದ್ದಾರೆ.
ಇದನ್ನೂ ಓದಿ :- ವಿವಾದದ ಬಳಿಕ ಎಚ್ಚೆತ್ತುಕೊಳ್ಳದ ಸರ್ಕಾರ – ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪಿಯುಸಿ ಪಠ್ಯ ಪರಿಷ್ಕರಣೆ!