ಕರ್ನಾಟಕದಲ್ಲಿ ಇದ್ದಕ್ಕಿದ್ದಂತೆ ಚಾಲ್ತಿಗೆ ಬಂದಿರುವ ಹಲಾಲ್ ಕಟ್ ಮತ್ತು ಜಟ್ಕಾ ಕಟ್ ವಿವಾದದ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.
ಬೆಲೆ ಏರಿಕೆ ಸೇರಿದಂತೆ ಯುವಜನರನ್ನು ಕಾಡುತ್ತಿರುವ ಅಂಶಗಳ ಬಗ್ಗೆ ಮಾತನಾಡದೆ ಅನಗತ್ಯವಾಗಿ ಕೆಲ ವಿಚಾರಗಳನ್ನು ವಿವಾದವಾಗಿ ಬೆಳೆಸಲಾಗುತ್ತಿದೆ ಎಂದು ದೂರಿದರು. ಹಲಾಲ್ ಕಟ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಾವಿರಾರು ವರ್ಷಗಳಿಂದ ಹಲಾಲ್ ನಡೆದುಕೊಂಡು ಬಂದಿದೆ. ಅವರ ಪದ್ಧತಿ ಅವರದ್ದು, ನಮ್ಮ ಪದ್ಧತಿ ನಮ್ಮದು. ರಕ್ತದಿಂದ ಕೂಡಿರುವ ಮಾಂಸ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಅವರ ನಂಬಿಕೆ. ಅವರ ನಂಬಿಕೆಯಂತೆ ಅವರು ಬದುಕಲು ಬಿಡಿ. ನಾವೂ ಕೂಡ ಹಲಾಲ್ ಕಟ್ ಮಾಂಸ ಖರೀದಿಸಿ ತಿಂದಿಲ್ವಾ? ನಾವು ಜಾತ್ರೆಗಳಲ್ಲಿ ಮರಿ ಕಡಿಯುವುದಿಲ್ಲವಾ? ಅನಗತ್ಯ ವಿಚಾರಕ್ಕೆ ಶಾಂತಿ ಹಾಳು ಮಾಡುವ ಕೆಲಸ ಮಾಡಬೇಡಿ. ಜನರಿಗೆ ಅಗತ್ಯವಿರುವ ವಿಚಾರಗಳ ಬಗ್ಗೆ ಚರ್ಚೆ ಮಾಡಿ. ಮನುಷ್ಯನ ಬದುಕಿಗೆ ಸಂಬಂಧವಿಲ್ಲದ ವಿಷಯಗಳನ್ನು ಪ್ರಸ್ತಾಪಿಸಿ, ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುವುದು ಎಂದು ಹೇಳಿದರು.
ಕೇಂದ್ರ ಸರ್ಕಾರವು ಯುಗಾದಿಗೆ ಕೇವಲ ಕಹಿ ನೀಡಿದೆ – ಸಿದ್ದು
ಕೇಂದ್ರ ಸರ್ಕಾರವು ಯುಗಾದಿಗೆ ಕೇವಲ ಕಹಿ ನೀಡಿದೆ. ಸಿಹಿ ಕೊಡಲೇ ಇಲ್ಲ. 50 ಕೆಜಿ ಡಿಎಪಿ ರಸಗೊಬ್ಬರದ ಮೂಟೆ ₹ 1,350 ಆಗಿದೆ. ಡಿಎಪಿ ರಸಗೊಬ್ಬರ ಒಂದು ಕೆಜಿ ಮೇಲೆ ₹ 3 ಹೆಚ್ಚಳವಾಗಿದೆ. ದೇಶದಲ್ಲಿ 1 ಕೋಟಿ 20 ಲಕ್ಷ ಟನ್ ಡಿಎಪಿ ಬಳಸುತ್ತಾರೆ. ₹ 3,600 ಕೋಟಿ ರೈತರಿಂದ ಸುಲಿಗೆ ಮಾಡುತ್ತಿದ್ದಾರೆ. ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದ ಮೋದಿ, ರೈತರ ರಕ್ತ ಹೀರುತ್ತಿದ್ದಾರೆ. ತೈಲ ಕಂಪನಿಗಳು ನಮ್ಮ ಅಧೀನದಲ್ಲಿಲ್ಲ ಎನ್ನುತ್ತಾರೆ. ಆದರೆ ಚುನಾವಣೆ ಸಮಯದಲ್ಲಿ ತೈಲ ಬೆಲೆ ಏರಿಕೆಯಾಗದೆ ಚುನಾವಣೆ ಮುಗಿಯುತ್ತಿದ್ದಂತೆ ಬೆಲೆ ಹೆಚ್ಚಾಗುತ್ತದೆ ಎಂದು ದೂರಿದರು.
ಈ ಸರ್ಕಾರವನ್ನು ಕಿತ್ತೊಗೆಯುವವರೆಗೆ ಹೋರಾಟ ಮಾಡುತ್ತೇವೆ – ಡಿಕೆ ಶಿವಕುಮಾರ್
ನಂತರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೇಂದ್ರ ಸರ್ಕಾರವು ಬೆಲೆ ಏರಿಕೆ ಎಂಬ ಗದಾಪ್ರಹಾರವನ್ನು ಬಡವರ ವಿರುದ್ಧ ನಡೆಸುತ್ತಿದೆ. ಅಚ್ಛೇ ದಿನ್ ಕೊಡುತ್ತೇವೆಂದು ಹೇಳಿ ನರಕ ತೋರಿಸುತ್ತಿದ್ದಾರೆ. ಕೃಷಿ ಯಂತ್ರೋಪಕರಣಗಳ ಬೆಲೆಯೂ ಹೆಚ್ಚಳವಾಗಿದೆ. ಈ ಸರ್ಕಾರವನ್ನು ಕಿತ್ತೊಗೆಯುವವರೆಗೆ ಹೋರಾಟ ಮಾಡುತ್ತೇವೆ. ಬೆಲೆ ಇಳಿಕೆಯಾಗುವವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದು ಘೋಷಿಸಿದರು. ಜನರ ಆದಾಯ ಪಾತಾಳಕ್ಕೆ ಕುಸಿದಿದ್ದರೆ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದೆ ಎಂದು ಹೇಳಿದ್ರು.
ಇದನ್ನು ಓದಿ : – ಹಲಾಲ್ ಇಲ್ಲ – ಜಟ್ಕಾ ಕಟ್ ಇಲ್ಲ- ಉತ್ತಮ ಮಾಂಸಕ್ಕಾಗಿ ಮುಗಿಬಿದ್ದ ಜನ