ಉಡುಪಿ (Udupi) ಯ ಶ್ರೀ ಕೃಷ್ಣ ಮಠ (Sri krishna) ದ ರಥಬೀದಿ ಪರಿಸರಕ್ಕೆ ಮಂಗಳೂರು (Mangaluru) ಕುಕ್ಕರ್ ಸ್ಫೋಟದ ಆರೋಪಿ ಉಗ್ರ ಶಾರೀಕ್ ಅಕ್ಟೋಬರ್ ನಲ್ಲಿ ಬಂದಿದ್ದ ಬಗ್ಗೆ ಮಂಗಳೂರಿನ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಶಾರೀಕ್ ನ ಮೊಬೈಲ್ ಪರಿಶೀಲನೆ ಸಂದರ್ಭ ರಥಬೀದಿಯಿಂದ ಕರೆ ಮಾಡಿರುವುದು ಕಂಡುಬಂದಿದೆ.
ಹೀಗಾಗಿ ಪೊಲೀಸರು ರಥಬೀದಿಗೆ ಆಗಮಿಸಿ, ಕೃಷ್ಣ ಮಠ ಆತನ ಗುರಿ ಆಗಿತ್ತೇ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ರಥಬೀದಿ ಸುತ್ತಲಿನ ಅಂಗಡಿಗಳಲ್ಲಿರುವ ಸಿಸಿ ಕ್ಯಾಮೆರಾ ಫೂಟೇಜ್ ಗಳನ್ನು ಸಂಗ್ರಹಿಸಿದ್ದಾರೆ. ಇನ್ನು ಶಾರೀಕ್ (Sharik) ಶ್ರೀಕೃಷ್ಣ ಮಠಕ್ಕೆ ಆಗಮಿಸಿದ್ದ ವೇಳೆ ರಥಬೀದಿ ಪರಿಸರದಲ್ಲಿರುವ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಆತನ ಮೊಬೈಲ್ ಪಡೆದು ಯಾರಿಗೋ ಕರೆ ಮಾಡಿರುವುದು ತಿಳಿದು ಬಂದಿದೆ. ಆಕೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಕೆಯು ತನ್ನ ಮೊಮ್ಮಗನಿಗೆ ಕರೆ ಮಾಡಿರುವುದಾಗಿ ತಿಳಿಸಿದ್ದಾಳೆ. ಇದನ್ನೂ ಓದಿ : – ಅಯ್ಯಪ್ಪನ ಸನ್ನಿಧಾನಕ್ಕೂ ಕಾಲಿಟ್ಟ ಧರ್ಮ ದಂಗಲ್
ಮೊಮ್ಮಗನನ್ನು ಅತಿಯಾಗಿ ಪ್ರೀತಿಸುವ ಆಕೆ ಯಾರೇ ಸಿಕ್ಕರೂ ಅವರಿಂದ ಮೊಬೈಲ್ ಪಡೆದು ಆತನಿಗೆ ಕರೆ ಮಾಡುವುದು ರೂಢಿಯಾಗಿದೆ. ಎಂದಿನಂತೆ ಆಕೆ ಶಾರೀಕ್ ನ ಮೊಬೈಲ್ ನಿಂದಲೂ ಕರೆ ಮಾಡಿರಬೇಕು ಎಂದು ತಿಳಿದುಬಂದಿದೆ. ಶ್ರೀ ಕೃಷ್ಣ ಮಠದಿಂದ ಆತ ಮಣಿಪಾಲ ಮಾರ್ಗವಾಗಿ ಕಾರ್ಕಳಕ್ಕೆ ತೆರಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : – ಜೆಡಿಎಸ್ ನಲ್ಲಿ ಕುಟುಂಬದವರು ಹೇಳಿದರೆ ಮಾತ್ರ ಹೆಬ್ಬೆಟ್ಟು ಒತ್ತೋದು – ಅಶೋಕ್ ವ್ಯಂಗ್ಯ