ಚಂದ್ರಶೇಖರ್ ಗುರೂಜಿಗೆ ಬ್ಲಾಕ್ ಮೇಲ್ ಮಾಡಿ ಸುಲಿಗೆಗೆ ಇಳಿದಿದ್ರಾ ಹಂತಕರು..!

ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ (CHANDRSHEKHAR) ಗುರೂಜಿಯನ್ನು ಇಬ್ಬರು ಸೇರಿ ಹತ್ಯೆ ಮಾಡಿದ್ದಲ್ಲ. 20 ರಿಂದ 25 ಜನರ ತಂಡ ಸೇರಿ ಕೊಲೆಯ ಸ್ಕೆಚ್ ಹಾಕಿದ್ದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ. ಈ ಹತ್ಯೆಯ ಹಿಂದೆ ಒಂದು ತಂಡವೇ ಕೆಲಸ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.


ದ್ವೇಷಕ್ಕೆ ಕಾರಣ ಏನು..?
ಮಹಾಂತೇಶ್ 2008ರಲ್ಲಿ ಗುರೂಜಿ ಅವರ ಚಂದ್ರಶೇಖರ ಗೌರಿ ಪರಿವಾರ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಕೆಲಸದ ಕೌಶಲ್ಯ ಮತ್ತು ಸಾಮರ್ಥ್ಯ ಕಂಡು ಈತನನ್ನು ಮುಂಬೈ ಬ್ರ್ಯಾಂಚ್ ಒಂದರ ಮುಖ್ಯಸ್ಥನನ್ನಾಗಿ ಗುರೂಜಿ ನೇಮಕ ಮಾಡುತ್ತಾರೆ. ತನಗೆ ನೀಡಿದ ಜವಾಬ್ದಾರಿಯನ್ನು ದುರುಪಯೋಗ ಪಡಿಸಿಕೊಂಡ ಈತ ಗುರೂಜಿ ಅವರ ಸಲಹೆ ಪಡೆಯಲು ಬರುವವರ ಜೊತೆಗೆ ನೇರವಾಗಿ ವ್ಯವಹಾರ ಮಾಡಲು ಆರಂಭಿಸುತ್ತಾನೆ. ಸರಳವಾಸ್ತು (SARALA VASTU) ಮಾಡಿಕೊಡಿಕೊಳ್ಳಲು ನಿಗದಿಪಡಿಸಿದ ಶುಲ್ಕವನ್ನು ಕಂಪನಿಗೆ ನೀಡದೇ ತಾನೇ ಗುಳುಂ ಮಾಡುತ್ತಾನೆ. ಇದೇ ಸಮಯದಲ್ಲಿ ಮಹಾಂತೇಶ್ ಗೆ ಮಂಜುನಾಥ ಎಂಬಾತನ ಪರಿಚಯವಾಗುತ್ತದೆ. ಕೊನೆಗೆ ಮಂಜುನಾಥ ಮತ್ತು ಈತನ ಜೊತೆಗೆ ಇನ್ನು ಹಲವು ಮಂದಿ ಮೋಸ ಮಾಡಿರುವ ವಿಚಾರ ಗುರೂಜಿಗೆ ತಿಳಿಯುತ್ತದೆ. ಇವರ ಮೇಲೆ ಸಿಟ್ಟಾದ ಗುರೂಜಿ ಮಹಾಂತೇಶ್ ತಂಡದಲ್ಲಿದ್ದ 20 ರಿಂದ 25 ಮಂದಿಯನ್ನು 2016ರಲ್ಲಿ ಕೆಲಸದಿಂದಲೇ ತೆಗೆದು ಹಾಕುತ್ತಾರೆ. ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಗುರೂಜಿ ಮೇಲೆ ಇವರಿಗೆ ದ್ವೇಷ ಆರಂಭವಾಗುತ್ತದೆ.

ಬ್ಲಾಕ್ ಮೇಲ್ ಮಾಡಿದ್ದು ಹೇಗೆ..?
ಚಂದ್ರಶೇಖರ ಗುರೂಜಿ ಹುಬ್ಬಳ್ಳಿ ವಿಮಾನ ನಿಲ್ದಾಣದ ರಸ್ತೆಯ ಡೆಕಥ್ಲಾನ್ ಶೋರೂಂ ಹಿಂದೆ ʼಗೋಕುಲʼ ಹೆಸರಿನಲ್ಲಿ ಅಪಾರ್ಟ್ಮೆಂಟ್ ಕಟ್ಟಿಸಿದ್ದರು. ಈ ಅಪಾರ್ಟ್ಮೆಂಟ್ ಗುರೂಜಿಯವರ ಬೇನಾಮಿ ಆಸ್ತಿಯಾಗಿದ್ದು ಮಹಾಂತೇಶ್ ಪತ್ನಿಯ ಹೆಸರಿನಲ್ಲಿ ನಿರ್ಮಿಸಿದ್ದರು ಎಂಬ ಮಾಹಿತಿ ಸಿಕ್ಕಿತ್ತು. ಆದರೆ ಈ ಆಸ್ತಿ ಬೇನಾಮಿ ಆಗಿರಲಿಲ್ಲ. ಗುರೂಜಿ ಅವರ ಸ್ವಂತ ಆಸ್ತಿಯಾಗಿದ್ದು ಈ ಅಪಾರ್ಟ್ ಮೆಂಟ್ ನಲ್ಲಿ ಮಹಾಂತೇಶ್ ಪತ್ನಿ ಜೊತೆ ವಾಸವಾಗಿದ್ದ.
ಈ ಅಪಾರ್ಟ್ಮೆಂಟ್ ವಿಚಾರವಾಗಿ ಮಹಾಂತೇಶ್ ಮತ್ತು ಮಂಜುನಾಥ ಕಾನೂನು ಸಮರಕ್ಕೆ ಇಳಿದಿದ್ದರು. ಅಪಾರ್ಟ್ಮೆಂಟ್ ಸರಿಯಾಗಿ ನಿರ್ಮಾಣಗೊಂಡಿಲ್ಲ, ಪಾರ್ಕಿಂಗ್ ಗೆ ಜಾಗವಿಲ್ಲ, ಮಳೆ ನೀರು ಸರಿಯಾಗಿ ಹೋಗುತ್ತಿಲ್ಲ, ಸೋಲಾರ್ ವ್ಯವಸ್ಥೆ ಇಲ್ಲ ಎಂದು ಆರೋಪಿಸಿ ಧಾರವಾಡ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ಈ ವಿಚಾರವಾಗಿ ಗುರೂಜಿ ಪ್ರಶ್ನೆ ಮಾಡಿದಾಗ ಹಣ ನೀಡಿದರೆ ದೂರನ್ನು ಹಿಂಪಡೆಯುವುದಾಗಿ ತಿಳಿಸಿದ್ದರು. ಅಷ್ಟೇ ಅಲ್ಲದೇ ಹಣ ನೀಡದೇ ಇದ್ದರೆ ಹತ್ಯೆ ಮಾಡುವುದಾಗಿ ಬೆದರಿಕೆ ಸಹ ಹಾಕಿದ್ದರು. ಆದರೆ ಗುರೂಜಿ ಹಂತಕರ ಜೀವ ಬೆದರಿಕೆ ಮತ್ತು ಬ್ಲಾಕ್ ಮೇಲ್ ಗೆ ಬಗ್ಗಿರಲಿಲ್ಲ. ಹಣ ನೀಡದ್ದಕ್ಕೆ ಸಿಟ್ಟಾಗಿದ್ದ ಇವರು ಗುರೂಜಿ ವಿರುದ್ಧ ದ್ವೇಷ ಸಾಧಿಸಲು ಮುಂದಾಗುತ್ತಿದ್ದರು. ಯಾವುದೇ ಬೆದರಿಕೆಗೆ ಜಗ್ಗದ ಕಾರಣ ಸಿಟ್ಟಾಗಿದ್ದ ಇವರು ಪೂರ್ವ ತಯಾರಿ ಮಾಡಿಕೊಂಡು ಬಂದು ಕೊಲೆ ಮಾಡಿದ್ದಾರೆ.

ಗುರೂಜಿ ಸಂಬಂಧಿ ಸಂಜಯ್ ಅಂಗಡಿ ಎಂಬವರು ನೀಡಿದ ದೂರಿನ ಆಧಾರದಲ್ಲಿ ವಿದ್ಯಾನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 34, 302(ಕೊಲೆ) ಅಡಿ ಎಫ್ಐಆರ್ (FIR) ದಾಖಲಾಗಿದೆ. ಮಂಗಳವಾರ ಹೋಟೆಲ್ ಗೆ ಬಂದಿದ್ದ ಮಹಾಂತೇಶ್ ಮತ್ತು ಮಂಜುನಾಥ್ ಅಪಾರ್ಟ್ ಮೆಂಟ್ ವಿಚಾರ ಸಂಬಂಧ ಮಾತನಾಡಲು ಬನ್ನಿ ಗುರೂಜಿ ಎಂದು ಕರೆದು ಹತ್ಯೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!