ವೀರ ಸಾವರ್ಕರ್ ಫೋಟೋ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನಿಗೆ ಚಾಕು ಇರಿದ ಪ್ರಕರಣ ಸಂಬಂಧ ಈಗಾಗಲೇ ಇಬ್ಬರನ್ನು ಬಂಧಿಸಿದ್ದ ಪೊಲೀಸರು, ಇದೀಗ ಪ್ರಕರಣದ ಪ್ರಮುಖ ಆರೋಪಿಯನ್ನು ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾರ್ನಾಮಿಬೈಲ್ ನ ನಿವಾಸಿ ಜಬೀವುಲ್ಲಾನನ್ನು ಪೊಲೀಸರು ತಡರಾತ್ರಿ ಗುಂಡು ಹಾರಿಸಿ ಬಂಧಿಸಿದ್ದಾರೆ.
ಗಾಂಧಿ ಬಜಾರ್ ನಲ್ಲಿ ಪ್ರೇಮ್ಸಿಂಗ್ ಎಂಬ ಯುವಕನಿಗೆ ಆರೋಪಿಗಳು ಚಾಕು ಇರಿದು ಪರಾರಿಯಾಗಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು, ಶಿವಮೊಗ್ಗ ಜೆಸಿ ನಗರದ ನದೀಮ್ (25) ಹಾಗೂ ಬುದ್ಧ ನಗರದ ಅಬ್ದುಲ್ ರೆಹಮಾನ್ (25) ಎಂಬವನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿತ್ತು. ನಂತರ ಪ್ರಕರಣದ ಪ್ರಮುಖ ಆರೋಪಿಗಾಗಿ ಶೋಧ ಮುಂದುವರಿಸಿದ್ದರು. ಅದರಂತೆ ತೀರ್ಥಹಳ್ಳಿ ರಸ್ತೆಯ ನಮೋ ಶಂಕರ ಲೇಔಟ್ನಲ್ಲಿ ಆರೋಪಿ ಇರುವ ಸುಳಿವು ಪಡೆದ ಪೊಲೀಸರು ತಡರಾಥ್ರಿ ಕಾರ್ಯಾಚರಣೆಗೆ ಇಳಿದು ಬಂಧಿಸಿದ್ದಾರೆ. ಸೋಮವಾರ ನಡೆದ ಘಟನೆಯಲ್ಲಿ ಈತ ಮೊದಲ ಆರೋಪಿಯಾಗಿದ್ದಾನೆ.
ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದ ಪೊಲೀಸರ ಮೇಲೆಯೇ ಆರೋಪಿ ಜಬೀವುಲ್ಲಾ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಪೊಲೀಸರ ಆತ್ಮರಕ್ಷಣೆಗಾಗಿ ವಿನೋಬನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಕುರಿ ಅವರು ಸಬೀವುಲ್ಲಾನ ಕಾಲಿಗೆ ಗುಂಡು ಹಾರಿಸಿದ್ದಾರೆ. ಪರಿಣಾಮವಾಗಿ ಆರೋಪಿ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ. ಕೂಡಲೇ ಈತನನ್ನು ಬಂಧಿಸಿ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಆರೋಪಿ ಜಬೀವುಲ್ಲಾನನ್ನು ಮೆಗ್ಗಾನ್ ಜೈಲ್ ವಾರ್ಡ್ಗೆ ಶಿಫ್ಟ್ ಮಾಡಿದ್ದಾರೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಮಿಂದೇಳಬೇಕಿದ್ದ ಶಿವಮೊಗ್ಗ ಬೂದಿಮುಚ್ಚಿದ ಕೆಂಡವಾಗಿದೆ. ವೀರಸಾವರ್ಕರ್-ಟಿಪ್ಪು ಫ್ಲೆಕ್ಸ್ ವಿವಾದ ಎಬ್ಬಿಸಿದ್ದ ಪ್ರಕರಣದಲ್ಲಿ ಶಿವಮೊಗ್ಗದಲ್ಲಿ ಬೆಳಗ್ಗಿನ ಜಾವ 4 ಗಂಟೆಗೆ ಕೂಡ ಗುಂಡಿನ ಸದ್ದು ಕೇಳಿದೆ. ಪ್ರೇಮ್ ಸಿಂಗ್ ಗೆ ಚೂರಿ ಇರಿದ ಪ್ರಕರಣದಲ್ಲಿ ಆರೋಪಿಗಳ ಬಂಧಿಸಲು ಹೋದ ಪೊಲೀಸರ ಮೇಲೆ ಆರೋಪಿ ಜಬೀವುಲ್ಲಾ (30) ಅನ್ನೋ ಕಿಡಿಗೇಡಿ ಚಾಕು ತೋರಿಸಿ ಬೆದರಿಸಿದ್ದಾನೆ. ದುಷ್ಕರ್ಮಿಗೆ ಬಿಸಿ ಮುಟ್ಟಿಸಿದ ವಿನೋಬಾನಗರ ಠಾಣೆ ಪಿಎಸ್ಐ ಮಂಜುನಾಥ್ ಕುರಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಪೊಲೀಸರಿಗೆ ಇರಿಯೋಕೆ ಮುಂದಾದ ಕಿಡಿಗೇಡಿ ಜಬೀವುಲ್ಲಾನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ : – ವಾಜಪೇಯಿ 4ನೇ ಪುಣ್ಯತಿಥಿ – ಗಣ್ಯರಿಂದ ಪುಷ್ಪ ನಮನ
ಫಾಲಕ್ ಪ್ಯಾಲೇಸ್ ಹಿಂಭಾಗದ ಪ್ರದೇಶದಲ್ಲಿ ಘಟನೆ ನಡೆದಿದ್ದು, ಜಬೀವುಲ್ಲಾನನ್ನು ಪೊಲೀಸರು ಮೆಗ್ಗಾನ್ಗೆ ದಾಖಲಿಸಿದ್ದಾರೆ. ಗಲಾಟೆ ಬೆನ್ನಲ್ಲೇ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ರು. ಖುದ್ದು ಲಾಠಿ ಹಿಡಿದು ಪರಿಶೀಲನೆಗೆ ಇಳಿದ್ರು. ಐಜಿಪಿ ತ್ಯಾಜರಾಜನ್, ಎಸ್ಪಿ ಲಕ್ಷ್ಮಿಪ್ರಸಾದ್ ಬಳಿ ಮಾಹಿತಿ ಸಂಗ್ರಹಿಸಿದ್ರು. ತ್ರಿಬಲ್ ರೈಡಿಂಗ್, ಅನಗತ್ಯ ಸಂಚಾರ ಮಾಡುವವರ ಪರಿಶೀಲಿಸಿದ್ರು. ಬಳಿಕ ಘರ್ಷಣೆ ವೇಳೆ ಪ್ರೇಮ್ ಸಿಂಗ್ ಎಂಬಾತನಿಗೆ ಚಾಕು ಇರಿದ ಸಂಬಂಧ ನದೀಮ್ (25), ಅಬ್ದುಲ್ ರೆಹಮಾನ್ (25) ಅನ್ನೋವ್ರನ್ನ ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸ್ತಿದ್ದಾರೆ.
ಸದ್ಯ ಶಿವಮೊಗ್ಗದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ಕಂಟ್ರೋಲ್ಗೆ ತರುವ ಸಲುವಾಗಿ ಶಿವಮೊಗ್ಗ ನಗರ ಹಾಗೂ ಭದ್ರಾವತಿ ನಗರ ಪ್ರದೇಶದಲ್ಲಿ ಆ.18ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 144 ಸೆಕ್ಷನ್ ಜಾರಿ ಹಿನ್ನೆಲೆ ಶಿವಮೊಗ್ಗ ಹಾಗೂ ಭದ್ರಾವತಿ ನಗರದ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ, ಕುವೆಂಪು ವಿವಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.ಗಲಾಟೆ ನಡೆದ ಪ್ರದೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ವಾಹನ ಸವಾರರಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ನಗರದಲ್ಲಿ ಬಂದೋಬಸ್ತ್‍ಗಾಗಿ ಈ ಹಿಂದೆ ಇಲ್ಲೇ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಅಧಿಕಾರಿಗಳನ್ನು ಕರೆಸಿಕೊಳ್ಳಲಾಗಿದೆ. 10 ಕೆಎಸ್‍ಆರ್‍ಪಿ, 10 ಡಿಎಆರ್ ಹಾಗು ಆರ್‍ಎಎಫ್ ತುಕಡಿ ಜಿಲ್ಲೆಗೆ ಆಗಮಿಸಿವೆ.
ಇದನ್ನೂ ಓದಿ : – ದೇಶ ವಿಭಜನೆ ಒಪ್ಪಿಕೊಳ್ಳದಿದ್ರೆ ಭಾರತ ಛಿದ್ರವಾಗ್ತಿತ್ತು – ಪಟೇಲ್ ಹೇಳಿಕೆ ಪುನರುಚ್ಚರಿಸಿದ ಸೋನಿಯಾ ಗಾಂಧಿ