ಮುಂದುವರಿದ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಕೇಂದ್ರೀಯ ಸಂಸ್ಥೆಗಳು ಮತ್ತು ಉದ್ಯೋಗದಲ್ಲಿ ಶೇ. 10 ರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನ (Constitution) ದ 103ನೇ ತಿದ್ದುಪಡಿಯನ್ನು ಸುಪ್ರೀಂಕೋರ್ಟ್ (Supreme court) ಎತ್ತಿ ಹಿಡಿದಿದೆ.
ಸಾಮಾನ್ಯ ವರ್ಗಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ. 10 ರಷ್ಟು ಮೀಸಲಾತಿ ಒದಗಿಸುವ ಸಂವಿಧಾನದ 103ನೇ ತಿದ್ದುಪಡಿ ಮಾನ್ಯತೆಯನ್ನು ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ (UU.Lalith) ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಮೂರನೇ ಎರಡರಷ್ಟು ಬಹುಮತದೊಂದಿಗೆ ಎತ್ತಿ ಹಿಡಿದಿದೆ.
ನಾಲ್ವರು ನ್ಯಾಯಾಧೀಶರು ಈ ಕಾಯ್ದೆ ಪರವಾಗಿ ವಾದಿಸಿದರೆ, ಮತ್ತೋರ್ವರು ವಿರುದ್ಧವಾಗಿ ವಾದಿಸಿದ್ದಾರೆ. ತೀರ್ಪನ್ನು ಓದಿದ ನ್ಯಾಯಾಧೀಶ ಮಹೇಶ್ವರಿ, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ. 10 ರಷ್ಟು ಮೀಸಲಾತಿ ಒದಗಿಸುವುದರಿಂದ ಸಂವಿಧಾನದ ಮೂಲ ರಚನೆ ಉಲ್ಲಂಘಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಮೀಸಲಾತಿ ನೀತಿಯನ್ನು ಪುನರ್ ಪರಿಶೀಲಿಸಬೇಕಾದ ಅಗತ್ಯವಿದೆ ಎಂದು ನ್ಯಾಯಾಧೀಶರಾದ ತ್ರಿವೇದಿ ಮತ್ತು ಪಾರ್ದಿವಾಲಾ ಹೇಳಿದರು. ಆದಾಗ್ಯೂ, ನ್ಯಾಯಾಧೀಶರಾದ ಎಸ್. ರವೀಂದ್ರ ಭಟ್ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ. 10 ರಷ್ಟು ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಬಡವರನ್ನು ಇದರಿಂದ ಹೊರಗಿಡುವುದು ತಾರತಮ್ಯವಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : – ಬೆಳಗಾವಿ ,ಬಾಗಲಕೋಟೆ ಜಿಲ್ಲೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರವಾಸ