ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿಯಲ್ಲಿ ನೀಳ ದಂತ ಹೊಂದಿದ್ದ ಆನೆ ಭೋಗೇಶ್ವರ್ ಮೃತಪಟ್ಟಿದೆ. ಉದ್ದನೆಯ ದಂತಗಳಿಂದ ಪ್ರಖ್ಯಾತವಾಗಿದ್ದ ಭೋಗೇಶ್ವರ ಗಂಡಾನೆ ನಾಗರಹೊಳೆ, ಬಂಡೀಪುರ ವ್ಯಾಪ್ತಿಯಲ್ಲಿ ಹೆಚ್ಚು ಕಾಣಿಸುತ್ತಿತ್ತು.
ಸಫಾರಿ ವೇಳೆ ಪ್ರವಾಸಿಗರಿಗೆ ಆಗಾಗ ಕಾಣಿಸಿಕೊಳ್ಳುತ್ತಿತ್ತು. ವನ್ಯಜೀವಿ ಪ್ರಿಯರ ನೆಚ್ಚಿನ ಅನೆಯಾಗಿತ್ತು. ಕಬಿನಿಗೆ ಹೋಗುತ್ತಿದ್ದ ಪ್ರವಾಸಿಗರು ಈ ಆನೆ ಸಿಕ್ಕರೇ ಸಾಕು ಅಂತಿದ್ದರು. ಆದರೆ ಕೆಲವರಿಗೆ ಮಾತ್ರ ಕಾಣಿಸುತ್ತಿತ್ತು. ಇದೀಗ ಈ ಆನೆ ಬಂಡೀಪುರ ವ್ಯಾಪ್ತಿಯ ಗುಂಡ ವಲಯದ ಅರಣ್ಯದಲ್ಲಿ ಸಾವನ್ನಪ್ಪಿದೆ.
ವಯೋಸಹಜವಾಗಿ ಆನೆ ಸಾವನ್ನಪ್ಪಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ವಾರದ ಹಿಂದಿನಿಂದಲು ಭೋಗೇಶ್ವರ್ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಕಳೆದ ವಾರ ಮತ್ತೊಂದು ಆನೆ ಜೊತೆಗೆ ಜಗಳಕ್ಕಿಳಿದಿತ್ತು. ಇದೀಗ ವಯೋಸಹಜವಾಗಿ ಆನೆ ಸಾವನ್ನಪ್ಪಿದ್ದು, ದೇಹದಲ್ಲಿ ಯಾವುದೇ ಗಾಯಗಳೂ ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.