ಕ್ರೈಮ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಸೈಕಿಕ್ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ನಿವೃತ್ತ ಪೊಲೀಸ್ ಆಧಿಕಾರಿಗಳ ಉಪಸ್ಥಿತಿಯಲ್ಲಿ ನೆರವೇರಿತು.
ಹತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿರುವ ಪುಷ್ಕರ್ ಗಿರಿಗೌಡ, ಸೈಕಿಕ್ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಕ್ರೈಮ್, ಸಸ್ಪೆನ್ಸ್, ಥ್ರಿಲ್ಲರ್ ಚಿತ್ರಗಳನ್ನು ಮಾಮೂಲಿ ಚೌಕಟ್ಟನ್ನು ಬಿಟ್ಟು ಈರೀತಿಯೂ ಮಾಡಿ ತೋರಿಸಬಹುದು ಎಂದು ಹೇಳಹೊರಟಿರುವ ನಿರ್ದೇಶಕ ಪುಷ್ಕರ ಗಿರಿಗೌಡ ಅದಕ್ಕೆ ತಕ್ಕಂತೆ ಕಥೆ, ಚಿತ್ರಕಥೆಯನ್ನೂ ರಚಿಸಿದ್ದಾರೆ. ನಿರ್ದೇಶಕ ಕೆ.ಎಂ.ಚೈತನ್ಯ, ನಿವೃತ್ತ ಎಸಿಪಿಗಳಾದ ಶಿವರಾಮ್, ಹನುಮಂತೇಗೌಡ್ರು, ಎಸ್.ಕೆ. ಉಮೇಶ್, ನಿರ್ಮಾಪಕ ದೇವೇಂದ್ರರೆಡ್ಡಿ, ಮಂಜುನಾಥ್ ನಾಯಕ ಸರ್ದಾರ್ ಸತ್ಯ, ನಾಯಕಿ ಹಂಸ ಪ್ರತಾಪ್ ವೇದಿಕೆಯಲ್ಲಿದ್ದರು.
ಸರ್ದಾರ್ ಸತ್ಯ, ಹಂಸಾ ಪ್ರತಾಪ್, ರಮೇಶ್ ಭಟ್, ಅರವಿಂದ್ (ರಥಸಪ್ತಮಿ) ಮುಖ್ಯ ಭೂಮಿಕೆಯಲ್ಲಿರುವ ಸೈಕಿಕ್ ಸಿನಿಮಾದ ಟೀಸರ್ ಎ2 ಮ್ಯೂಸಿಕ್ ಯೂ ಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಎಂ.ಎಸ್.ತ್ಯಾಗರಾಜ್ ಅವರ ಸಂಗೀತ, ಹಿನ್ನೆಲೆ ಸಂಗೀತ, ಸಿನಿಟೆಕ್ ಸೂರಿ ಅವರ ಕ್ಯಾಮೆರಾ ಕೈಚಳಕ ಈ ಚಿತ್ರಕ್ಕಿದೆ.
ನಿರ್ದೇಶಕ ಪುಷ್ಕರ ಗಿರಿಗೌಡ ಮಾತನಾಡುತ್ತ “ಕ್ರೈಮ್-ಥ್ರಿಲ್ಲರ್- ಇನ್ವೆಸ್ಟಿಗೇಶನ್ ಸಿನಿಮಾ ಎಂದರೆ ರಕ್ತ ಸಿಕ್ತ ದೃಶ್ಯಗಳನ್ನು ವೈಭವೀಕರಿಸುವುದು ಸಾಮಾನ್ಯ. ಆದರೆ ಸೈಕಿಕ್ ಸಿನಿಮಾದಲ್ಲಿ ಅದರ ಹೊರತಾಗಿ, ಕ್ರೌರ್ಯವನ್ನು ಪರೋಕ್ಷವಾಗಿ ಮನದಟ್ಟು ಮಾಡುವ ರೀತಿಯಲ್ಲಿ ದೃಶ್ಯ ಸಂಯೋಜನೆ ಮಾಡಿದ್ದೇವೆ. ಅದಕ್ಕೆ ಪೂರಕವಾಗಿ ಛಾಯಾಗ್ರಹಣ, ಹಿನ್ನೆಲೆ ಸಂಗೀತ ಮತ್ತು ಶಬ್ದ ವಿನ್ಯಾಸ ಬೆಂಬಲ ನೀಡಿವೆ.
ಮೂರು ರೀತಿಯ ಲವ್ ಸ್ಟೋರಿಗಳನ್ನು ಇಲ್ಲಿ ಹೇಳಿದ್ದೇವೆ. ಚಿತ್ರದ ಹಲವಾರು ಮುಖ್ಯ ಅಂಶಗಳನ್ನು ಟೀಸರ್ ನಲ್ಲಿ ಬಿಟ್ಟುಕೊಟ್ಟಿಲ್ಲ. ಮುಂದೆ ಟ್ರೇಲರ್ ನಲ್ಲಿ ಅದನ್ನು ಹೇಳುತ್ತೇವೆ. ಚಿತ್ರದಲ್ಲಿ ಕೊಲೆ, ಅಪರಾಧ, ತನಿಖೆ ಇದ್ದರೂ ಅದರ ಜೊತೆ ಸಮಾಜಕ್ಕೆ ಒಂದೊಳ್ಳೆ ಸಂದೇಶವನ್ನು ಕೊಡುವ ಪ್ರಯತ್ನ ಮಾಡಿದ್ದೇವೆ ಎಂದರು. ಹಂಸ ಪ್ರತಾಪ್ ಮಾತನಾಡಿ ಪೊಲೀಸ್ ಪಾತ್ರ ಮಾಡಬೇಕೆನ್ನುವುದು ನನ್ನ ಬಹುದಿನಗಳ ಕನಸು. ಅದು ಈ ಚಿತ್ರದಲ್ಲಿ ನೆರವೇರಿದೆ ಎಂದರು.
ತುಂಬಾ ದಿನಗಳ ನಂತರ ಸರ್ದಾರ್ ಸತ್ಯ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತುಂಬಾ ಸ್ಟ್ರಾಂಗ್ ಕಂಟೆಂಟ್ ಇರುವ ಚಿತ್ರ. ಇಲ್ಲಿ ನಾನು ಈವರೆಗೂ ಮಾಡಿರದ ಹೊಸತನದ ಪಾತ್ರ ಮಾಡಿದ್ದೇನೆ ಎಂದರು.
ಉಳಿದಂತೆ ಕೈಲಾಸ್ ದೇವ್, ನಿಖಿತಾ ದೋರ್ತೋಡಿ, ರೇಷ್ಮಾ ಲಿಂಗರಾಜಪ್ಪ, ರೋಹಿತ್ ನಾಗೇಶ್, ಕೇಶವ್ ಮೊದಲಾದವರು ಸೈಕಿಕ್ ಚಿತ್ರದ ತಾರಬಳಗದಲ್ಲಿದ್ದಾರೆ.
ಸಿಲ್ಕ್ ಸಿನಿಮಾ ಅರ್ಪಿಸುವ ಸೈಕಿಕ್ ಚಿತ್ರವನ್ನು ಚೇತನ್ ಮಂಜುನಾಥ್ ನಿರ್ಮಾಣ ಮಾಡಿದ್ದಾರೆ. ವೈ.ಎಸ್.ಶ್ರೀಧರ್ ಅವರ ಸಂಕಲನ, ಪ್ರಸನ್ನ ಶೆಟ್ಟಿ ಅವರ ಸಂಭಾಷಣೆ ಹಾಗೂ ಗೋಪಿ ಜಾ ಅವರ ಸಾಹಸ ಸಂಯೋಜನೆಯಿದೆ.