Cinema

‘ಅಪ್ಪಾ ಐ ಲವ್ ಯು ಸಿನಿಮಾದ ಮೆಲೋಡಿ ಹಾಡು ರಿಲೀಸ್..ನೆನಪಿರಲಿ ಪ್ರೇಮ್ ಗೆ ಸಾಥ್ ಕೊಟ್ಟ ಯಂಗ್ ರೆಬಲ್ ಸ್ಟಾರ್

ಸ್ಟಾರ್ ಪ್ರೇಮ್ ಹಾಗೂ ಟಗರು ಪುಟ್ಟಿ ಖ್ಯಾತಿಯ ಮಾನ್ವಿತ್ ಕಾಮತ್ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿರುವ ಅಪ್ಪಾ ಐ ಲವ್ ಯು ಸಿನಿಮಾದ ಮೊದಲ ಹಾಡು ಅನಾವರಣ ಮಾಡಲಾಗಿದೆ. ಬೆಂಗಳೂರಿನ ಜಿಟಿ‌ ಮಾಲ್ ನಲ್ಲಿರುವ ಎಂಎಂ ಲೆಗಸಿಯಲ್ಲಿ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಿತು. ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಸಾಥ್ ಕೊಟ್ಟರು.

ಅಭಿಷೇಕ್ ಅಂಬರೀಶ್ ಮಾತನಾಡಿ,‌ ನಮ್ಮ‌ಅಪ್ಪನ ಬಗ್ಗೆ ಮಾತಾಡಬೇಕು ಎಂದರೆ ಗಂಟೆಗಟ್ಟಲೇ ಮಾತನಾಡಬೇಕಾಗುತ್ತದೆ. ಪ್ರೇಮಣ್ಣ ನನ್ನ ಯಾಕೆ ಪ್ರೋಗ್ರಾಂಗೆ ಕರೆಯುತ್ತಾರೆ ಎನಿಸಿತು. ಟೈಟಲ್ ನೋಡಿದಾಗ ಅನಿಸಿತು. ಅದಕ್ಕೆ ನನ್ನ ಕರೆದಿದ್ದಾರೆ ಅಂದುಕೊಂಡೆ. ಪ್ರತಿಯೊಬ್ಬರಿಗೂ ತಮ್ಮ ಅಪ್ಪನ ಜೊತೆಗೆ ಒಂದು ಮೆಮೋರಿ ಇದ್ದೇ ಇರುತ್ತದೆ ಎಂದುಕೊಂಡಿದ್ದೇ‌ನೆ. ತಂದೆ ಇರುವವರಿಗೂ ಅವರ ವಾಲ್ಯು ಗೊತ್ತಾಗೋಲ್ಲ. ಪ್ರೇಮ್ ಹೀರೋ ಆದವರು ಮನೆಯಿಂದ ಹೀರೋಯಿನ್ ತಂದಿದ್ದಾರೆ. ಕವಿ ರಾಜ್ ಸರ್ ತುಂಬಾ ಚೆನ್ನಾಗಿ ಹಾಡು ಬರೆದಿದ್ದಾರೆ. ತಬಲ ನಾಣಿ ಸರ್ ಒಂದೊಳ್ಳೆ ಮೆಸೇಜ್ ಇಟ್ಟುಕೊಂಡು, ಒಂದೊಳ್ಳೆ‌ ಕಂಟೆಂಟ್ ಇಟ್ಕೊಂಡು ಸೊಸೈಟಿಗೆ ಏನಾದರೂ ಕೊಡಬೇಕು ಅಂತಾ ಬಂದಿದ್ದೀರಾ..ನಿಮಗೆ ಒಳ್ಳೆಯದಾಗಲಿ ಎಂದರು.

ನೆನಪಿರಲಿ ಪ್ರೇಮ್ ಮಾತನಾಡಿ, ಸಿನಿಮಾದಲ್ಲಿ 22 ವರ್ಷ ಪೂರೈಸಿದ್ದೇನೆ ಅಂದರೆ ಅದು ನಮ್ಮ ತಂದೆಯಿಂದ ಅಂತಾ ಹೆಮ್ಮೆಯಿಂದ ಹೇಳಲು ಇಷ್ಟಪಡುತ್ತೇನೆ. ಕಾರಣ ಏನೆಂದರೆ ಸಿನಿಮಾ ಹೀರೋ ಆಗಬೇಕು ಅಂತಾ ಕನಸು ಕಟ್ಟಿಕೊಂಡಾಗ ಗಾಂಧಿನಗರದಲ್ಲಿ ಫೋಟೋ ಇಟ್ಟುಕೊಂಡು ತಿರುಗಾಡುತ್ತಿದ್ದೆ. ಮದುವೆ ಆಗಿತ್ತು. ಆಗ ತಾನೇ ಮಗಳು ಹುಟ್ಟಿದ್ದಳು. ಆಗ ಕಷ್ಟದಲ್ಲಿ ಇದ್ದೆ. ಕೆಲಸ ಮಾಡು ಅಂತಾ ಎಲ್ಲರು ಹೇಳುವವರು. ಆಗ ನಮ್ಮ‌ತಂದೆ ಬಳಿ ಕೆಲಸ ಹೋಗುತ್ತೇನೆ ಎಂದೆ. ನನ್ನ ತಂದೆ ಹೇಳಿದ‌ ಒಂದು ಮಾತು ನಾನು ಸ್ಟಾರ್ ಆಗಿ ಇಲ್ಲಿ ನಿಂತಿದ್ದೇನೆ. ತಬಲನಾಣಿ ಸಿನಿಮಾರಂಗದಲ್ಲಿ ಆದ ಛಾಪೂ ಮೂಡಿಸಿದ್ದಾರೆ. ಹೆಮ್ಮೆಯಾಗುತ್ತದೆ ಈಗ ಸ್ನೇಹಿತರ ಜೊತೆಗೂಡಿ ಅವರು ನಿರ್ಮಾಪಕರು ಆಗಿದ್ದಾರೆ. ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅವರ ಮೊದಲ ಪ್ರೊಡಕ್ಷನ್ ನಲ್ಲಿ ಹೊಸಬರಿಗೆ ಅವಕಾಶ ಕೊಟ್ಟಿದ್ದಾರೆ. ಅಥರ್ವ ಆರ್ಯ ಮೊದಲ ಸಿನಿಮಾದಲ್ಲಿ ಅದ್ಭುತ ಕಂಟೆಂಟ್ ತೆಗೆದುಕೊಂಡು ಬಂದಿದ್ದಾರೆ. ನಮಗೆಲ್ಲರಿಗೂ ಅವಕಾಶ ಕೊಟ್ಟಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು.

ನಿರ್ದೇಶಕ ಅಥರ್ವ ಆರ್ಯ ಮಾತನಾಡಿ, ನಾವು ಮಂಡ್ಯದವರು. ಅಂಬರೀಶ್ ಅಣ್ಣ ಅಂದರೆ ನಮಗೆ ವಿಶೇಷವಾದ ಪ್ರೀತಿ. ಅವರು ರೋಲ್ ಮಾಡೆಲ್. ನಮಗೆ ಬುದ್ದಿ ಬಂದಾಗಿನಿಂದ ನಮ್ಮ ಫಸ್ಟ್ ಹೀರೋ ಯಾರು ಅಂದರೆ ಅಂಬರೀಶ್ ಅಣ್ಣ. ಅಂಬರೀಶ್ ಅಣ್ಣನ ಸಿನಿಮಾ ನೋಡಿಕೊಂಡು ಬಂದವರು ನಾವು. ಅಂಬಿಯಣ್ಣನ ಸ್ಫೂರ್ತಿಯಿಂದ ಇಂಡಸ್ಟ್ರೀಗೆ ಬಂದಿದ್ದೇವೆ. ಜೀವನದಲ್ಲಿ ಪ್ರತಿಯೊಬ್ಬ ಮಕ್ಕಳು ತಮ್ಮ ತಂದೆಗೆ ಅಪ್ಪ ಐ ಲವ್ ಯು ಅಂತಾ ಹೇಳಲೇಬೇಕು. ಚಿಕ್ಕವರು ಇದ್ದಾಗ ಹೇಳುವುದು ಸಾಮಾನ್ಯ. ವಯಸ್ಸಾಗಿ, ಏನೂ ಆಗುತ್ತಿಲ್ಲ ಅಂತಾದಾಗ ಅವರ ಮುಂದೆ ನಿಂತು ಅಪ್ಪಾ ಐ ಲವ್ ಯು ಅಂತಾ ಹೇಳಬೇಕು. ಅವರ ಪ್ರೀತಿಗೆ,ತ್ಯಾಗಕ್ಕೆ ನಾವು ಪ್ರತಿಫಲ ಕೊಡಬೇಕು ಅಂದಾಗ ಅಪ್ಪಾ ಐ ಲವ್ ಯು ಅಂತಾ ಹೇಳಬೇಕು. ಸಂಸಾರದಲ್ಲಿ ಅಪ್ಪ ಎಷ್ಟು ಮುಖ್ಯ. ಸಮಾಜಕ್ಕೆ ತಂದೆ ಸ್ಥಾನ ಏನು ಅನ್ನೋದು ಕಥೆಯ ತಿರುಳು ಎಂದರು.

ಅಪ್ಪ-ಮಗನ ಬಾಂಧವ್ಯದ ಗೀತೆಯಾಗಿರುವ ಮನೆಗೊಂದು ಮಾಳಿಗೆ ಹಾಡಿಗೆ ಕಿನ್ನಾಳ್ ರಾಜ್ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಧ್ವನಿಯಾಗಿದ್ದು, ಆಕಾಶ್ ಪರ್ವ ಸಂಗೀತ ಒದಗಿಸಿದ್ದಾರೆ. ತಬಲಾ ನಾಣಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಸಂಜಯ್, ಜೀವಿತಾ, ರಂಗೀತರಂಗ ಅರವಿಂದ್, ವಿಜಯ್ ಚೆಂಡೂರ್, ಬಲ ರಾಜ್ವಾಡಿ, ಮಿಮಿಕ್ರಿ ಗೋಪಿ, ಅರುಣ ಬಾಲರಾಜ್, ವರ್ಧನ್ ತೀರ್ಥಹಳ್ಳಿ, ಗಿರೀಶ್ ಜತ್ತಿ, ಪಟೇಲ್ ಅಣ್ಣಯ್ಯಪ್ಪ ಸೇರಿದಂತೆ ಹಲವು ತಾರಾಬಳಗ ಚಿತ್ರದಲ್ಲಿದೆ.

ಜೂಟಾಟ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ಅಥರ್ವ್ ಆರ್ಯ ಅಪ್ಪಾ ಐ ಲವ್ ಯೂ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ಎರಡನೇ ಪ್ರಯತ್ನ. ಟೈಟಲ್ ಹೇಳುವಂತೆ ಇದು ತಂದೆಯ ಮಹತ್ವ ಸಾರುವ ಸಿನಿಮಾ. ಕುಟುಂಬದಲ್ಲಿ ಅಥವಾ ಸಮಾಜದಲ್ಲಿ ತಂದೆ ಕಡೆಗಣನೆಗೆ ಒಳಗಾದಾಗ ಯಾವ ರೀತಿ ನೋವು ಅನುಭವಿಸುತ್ತಾನೆ ಎಂಬುದೇ ಕಥೆಯ ತಿರುಳು. ಇಲ್ಲಿ ತಂದೆಯಾಗಿ ತಬಲಾನಾಣಿ ಬಣ್ಣ ಹಚ್ಚಿದ್ದು, ರಂಗಭೂಮಿ ಕಲಾವಿದರಾದ ಸಂಜಯ್ ಹಾಗೂ ಜೀವಿತ ವಸಿಷ್ಠ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.

ಅಪ್ಪಾ ಐ ಲವ್ ಯೂ ಸಿನಿಮಾಗೆ ನಾಗಾರ್ಜುನ್ ಆರ್ ಡಿ ಛಾಯಾಗ್ರಹಣ, ವೇಧಿಕ್ ವೀರ ಸಂಕಲನ, ಗಂಗಮ್ ರಾಜು ಕೊರಿಯೋಗ್ರಫಿ ಚಿತ್ರಕ್ಕಿದೆ. ಆಕಾಶ್ ಪರ್ವ ಸಂಗೀತ ನಿರ್ದೇಶನದ ಹಾಡುಗಳಿಗೆ ಡಾ.ನಾಗೇಂದ್ರ ಪ್ರಸಾದ್, ಕವಿರಾಜ್, k. ಕಲ್ಯಾಣ್, ಕಿನ್ನಾಳ್ ರಾಜ್ ಸಾಹಿತ್ಯ ಬರೆದಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು ಸುತ್ತಮುತ್ತ 65 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದ್ದು, ಶೀಘ್ರದಲ್ಲಿಯೇ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ. K R.S ಪ್ರೊಡಕ್ಷನ್ಸ್ ನ ಚೊಚ್ಚಲ ಕಾಣಿಕೆ‌ ಅಪ್ಪಾ ಐ ಲವ್ ಯೂ ಸಿನಿಮಾ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!