ಗಿಚ್ಚಿ ಗಿಲಿ ಗಿಲಿ, ಮಜಾಭಾರತ, ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಗಳ ಅನೇಕ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶೀರ್ಷಿಕೆಯಿಂದಲೇ ಈ ಚಿತ್ರ ಗಮನ ಸೆಳೆಯುತ್ತಿದೆ. ಸಿನಿಮಾದಲ್ಲಿ ಒಂದಿಬ್ಬರು ಕಾಮಿಡಿ ಕಲಾವಿದರು ಇದ್ದರೆ ಪ್ರೇಕ್ಷಕರಿಗೆ ಸಖತ್ ಮನರಂಜನೆ ಸಿಗುತ್ತದೆ. ಇನ್ನು, ಸಿನಿಮಾದ ಪಾತ್ರವರ್ಗದಲ್ಲಿ ಇರುವ ಎಲ್ಲರೂ ಹಾಸ್ಯ ನಟರೇ ಆಗಿದ್ದರೆ ಜನರಿಗೆ ಭರಪೂರ ಮನರಂಜನೆ ಗ್ಯಾರಂಟಿ. ಆ ರೀತಿ ಒಂದು ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಮೂಡಿಬರುತ್ತಿದೆ. ಆ ಸಿನಿಮಾದ ಹೆಸರು ‘ಆನ್ಲೈನ್ ಮದುವೆ, ಆಫ್ಲೈನ್ ಶೋಭನ’! ಈ ರೀತಿ ಡಿಫರೆಂಟ್ ಆದಂತಹ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. ‘ಅಪ್ಸರ ಮೂವೀಸ್’ ಸಂಸ್ಥೆ ಮೂಲಕ ವೇಂಪಲ್ಲಿ ಬಾವಾಜಿ ಅವರ ನಿರ್ದೇಶನದಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ಶೀರ್ಷಿಕೆಯ ಕಾರಣದಿಂದಲೇ ಈ ಸಿನಿಮಾ ಕೌತುಕ ಕೆರಳಿಸಿದೆ.
‘ಆನ್ಲೈನ್ ಮದುವೆ, ಆಫ್ಲೈನ್ ಶೋಭನ’ ಸಿನಿಮಾಗೆ ನಿರ್ದೇಶನ ಮಾಡಿರುವ ವೇಂಪಲ್ಲಿ ಬಾವಾಜಿ ಅವರಿಗೆ ಚಿತ್ರರಂಗದಲ್ಲಿ ಅನುಭವ ಇದೆ. ಈ ಹಿಂದೆ ‘ಗರ್ಭದಗುಡಿ’ ‘141’, ‘ಅಕ್ಕ ಭಾವ ಬಾಮೈದ’, ‘ನೀನೇನಾ’ ಮುಂತಾದ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು. ಈಗ ಅಪ್ಪಟ ಹಾಸ್ಯ ಪ್ರಧಾನ ಕಥಾಹಂದರ ಇರುವ ‘ಆನ್ಲೈನ್ ಮದುವೆ, ಆಫ್ಲೈನ್ ಶೋಭನ’ ಚಿತ್ರವನ್ನು ಅವರು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜೊತೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ವೇಂಪಲ್ಲಿ ಬಾವಾಜಿ ಅವರೇ ನಿಭಾಯಿಸಿದ್ದಾರೆ. ಕಿರುತೆರೆಯಲ್ಲಿ ಜನಮೆಚ್ಚುಗೆ ಗಳಿಸಿದ ‘ಗಿಚ್ಚಿ ಗಿಲಿ ಗಿಲಿ’, ‘ಮಜಾಭಾರತ’, ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮಗಳ ಅನೇಕ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜಗಪ್ಪ, ಸುಶ್ಮಿತಾ, ಸೀರುಂಡೆ ರಘು, ಗಜೇಂದ್ರ, ರಾಘವಿ ಅಭಿನಯಿಸಿದ್ದಾರೆ. ಅವರ ಜೊತೆ ಯಶಸ್ವಿನಿ, ಚಂದನಾ, ಶರಣ್ಯ ರೆಡ್ಡಿ ಮುಂತಾದವರು ‘ಆನ್ಲೈನ್ ಮದುವೆ, ಆಫ್ಲೈನ್ ಶೋಭನ’ ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
ಬಾಲು ಅವರ ಛಾಯಾಗ್ರಹಣ, ಅಲೆಕ್ಸ್ ಕಲಾವಿದರ ಸಂಗೀತ, ಅರುಣ ಪ್ರಸಾದ್, ವೇಂಪಲ್ಲಿ ಬಾಲಾಜಿ ಅವರ ಸಾಹಿತ್ಯ, ಗಣೇಶ್, ಸದಾಶಿವ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯದಲ್ಲೇ ಈ ಸಿನಿಮಾವನ್ನು ತೆರೆಕಾಣಿಸಬೇಕು ಎಂಬ ಗುರಿ ಇಟ್ಟುಕೊಂಡು ಚಿತ್ರತಂಡ ಕಾರ್ಯನಿರತವಾಗಿದೆ. ಸೈಬರ್ ಜಮಾನಾದಲ್ಲಿ ಆನ್ಲೈನ್, ಆಫ್ಲೈನ್ ಎಂಬ ಪದಗಳು ಸಿಕ್ಕಾಪಟ್ಟೆ ಬಳಕೆ ಆಗುತ್ತದೆ. ‘ಆನ್ಲೈನ್ ಮದುವೆ, ಆಫ್ಲೈನ್ ಶೋಭನ’ ಸಿನಿಮಾ ಕೂಡ ಈಗಿನ ಕಾಲದ ಕಥೆ ಇರುವ ಚಿತ್ರ ಎಂದು ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ.