ತಮಿಳು (Tamil) , ಕನ್ನಡ (Kannada), ತೆಲುಗು (Telugu) , ಹಿಂದಿ, ಮಲಯಾಳಂ ಸೇರಿದಂತೆ 19ಕ್ಕೂ ಅಧಿಕ ಭಾಷೆಗಳಲ್ಲಿ ತಮ್ಮ ಸ್ವರ ಮಾಧುರ್ಯದ ಮೂಲಕ ಸಂಗೀತ ಸುಧೆ ಹರಿಸಿದ್ದ ಹಿರಿಯ ಗಾಯಕಿ ವಾಣಿ ಜಯರಾಮ್ (Vani jayaram) ಶನಿವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದರು. ವಯೋಸಹಜ ಕಾಯಿಲೆಗಳೇನೂ ಅವರಿಗೆ ಇದ್ದಿರಲಿಲ್ಲ. ಮನೆಯಲ್ಲಿ ಏಕಾಂಗಿಯಾಗಿ ವಾಸವಿದ್ದ ಅವರ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಇದರ ನಡುವೆ ಹಣೆಯ ಮೇಲೆ ಗಾಯವಾಗಿದ್ದೂ ಕೂಡ ಸಾವಿನ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿತ್ತು.
ಹಿರಿಯ ಗಾಯಕಿಯ ನಿಗೂಢ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದರು. ಭಾನುವಾರ ಅವರ ಮರಣೋತ್ತರ ಪರೀಕ್ಷೆಯ ವಿವರ ಬಹಿರಂಗವಾಗಿದ್ದು, ಸಾವಿನ ಬಗ್ಗೆ ಇದ್ದ ಅನುಮಾನಗಳೆಲ್ಲಾ ದೂರವಾಗಿದೆ. ಅದರೊಂದಿಗೆ ಮನೆಯ ಹಾಗೂ ಅಕ್ಕಪಕ್ಕದ ಸಿಸಿಟಿವಿ (CCTV) ದೃಶ್ಯಾವಳಿಗಳನ್ನೂ ಪರಿಶೀಲಿಸಿದ ಪೊಲೀಸರು ಹಿರಿಯ ಗಾಯಕಿ ಸಾವಿನ ಕೇಸ್ ನ್ನು ಮುಗಿಸಿದ್ದಾರೆ. ‘ವಾಣಿ ಜಯರಾಮ್ ಅವರ ಸಾವಿನಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪೋಸ್ಟ್ ಮಾರ್ಟೆಮ್ ವರದಿ ತಿಳಿಸಿದೆ. ಅವರು ತಮ್ಮ ಹಾಸಿಗೆಯ ಬಳಿ ಹಳೆಯ ಮರದ ಮೇಜಿನ ಮೇಲೆ ಜಾರಿ ಬಿದ್ದಿದ್ದರು. ಮೇಜಿನ ಮೇಲೂ ರಕ್ತದ ಕಲೆ ಇತ್ತು. ಟೇಬಲ್ 2 ಅಡಿ ಎತ್ತರವಿದೆ. ಮೇಜಿಗೆ ಬಿದ್ದ ನಂತರ ಅವರ ಹಣೆಯಿಂದ ಭಾರೀ ರಕ್ತಸ್ರಾವವಾಗಿದೆ. ಅವರ ಹಣೆಯ ಮೇಲೆ ಗಾಯವಾಗಿದ್ದೂ ಕಾಣುತ್ತಿತ್ತು. ಸಿಸಿಟಿವಿಯನ್ನು ವೀಕ್ಷಿಸಿದಾಗ ಆಕೆಯ ಮನೆಗೆ ಹೊರಗಿನವರು ಯಾರೂ ಬಂದಿರಲಿಲ್ಲ’ ಎಂದು ಪೊಲೀಸರು (Police) ತಿಳಿಸಿದ್ದಾರೆ. 77 ವರ್ಷದ ಗಾಯಕಿಗೆ ಗಣರಾಜ್ಯೋತ್ಸವ ಮುನ್ನಾ ದಿನ ಕೇಂದ್ರ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ಘೋಷಣೆ ಮಾಡಿತ್ತು. ಶನಿವಾರ ಅವರ ಮನೆಯ ಕೆಲಸದ ಹೆಂಗಸು ಮಲರ್ ಕೋಡಿ ಸಾಕಷ್ಟು ಬಾರಿ ಮನೆಯ ಬೆಲ್ ಬಾರಿಸಿದರೂ, ವಾಣಿ ಜಯರಾಮ್ ಬಾಗಿಲು ತೆಗೆಯದ ಕಾರಣ, ಅವರ ಸಂಬಂಧಿಗಳು ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದನ್ನುಓದಿ :- ಬಿಜೆಪಿಯ ಹುನ್ನಾರ ಆರ್ ಎಸ್ ಎಸ್ ಕುತಂತ್ರಕ್ಕೆ ಬಲಿಯಾಗಬೇಡಿ – ಕುಮಾರಸ್ವಾಮಿ
ಕೊನೆಗೆ ಬದಲಿ ಕೀ ಬಳಸಿ ಮನೆಯ ಬಾಗಿಲು ತೆಗೆದಾಗ, ವಾಣಿ ಜಯರಾಮ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಗೊತ್ತಾಗಿತ್ತು. ಗಾಯಕಿಯ ಮನೆಯಲ್ಲಿ ಕಳೆದ 10 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮಲರ್ ಕೋಡಿ, ವಾಣಿ ಜಯರಾಮ್ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. “ಪದ್ಮಭೂಷಣ ಪ್ರಶಸ್ತಿ ಘೋಷಣೆಯಾದ ದಿನದಿಂದಲೂ ಅಭಿನಂದಿಸಲು ಭೇಟಿ ನೀಡಿದ ಅತಿಥಿಗಳು ಮತ್ತು ಹಿತೈಷಿಗಳನ್ನು ಮಾತನಾಡಿಸುವುದರಲ್ಲಿಯೇ ಅವರು ನಿರತರಾಗಿದ್ದರು. ಪ್ರತಿದಿನವೂ ಅವರಿಗೆ ಸಾಕಷ್ಟು ಫೋನ್ ಗಳು ಬರುತ್ತಿತ್ತು ಹಾಗೂ ಎಲ್ಲಾ ಕರೆಗಳಿಗೂ ಅವರು ಉತ್ತರಿಸುತ್ತಿದ್ದರು. ಕರೆ ಮಾಡಿದ ಎಲ್ಲರಿಗೂ ಧನ್ಯವಾದ ಹೇಳುತ್ತಿದ್ದರು. ಆದರೆ, ಮಕ್ಕಳಿಲ್ಲದ ಅವರು ಒಬ್ಬಂಟಿಯಾಗಿ ಬಾಳುತ್ತಿದ್ದರು’ ಎಂದು ಹೇಳಿದ್ದರು.
ಇದನ್ನುಓದಿ :- ಇಂದು ಪ್ರಧಾನಿ ಮೋದಿ ಬೆಂಗಳೂರು ತುಮಕೂರು ಪ್ರವಾಸ