ಬೆಂಗಳೂರು : ರಾಜ್ಯದಲ್ಲಿ ಒಟ್ಟು 34 ಜನರಲ್ಲಿ ಜೆಎನ್.1 ರೂಪಾಂತರಿ ವೈರಸ್ ದೃಢವಾಗಿದೆ. ಕೇರಳದಲ್ಲಿ ಕಾಣಿಸಿಕೊಂಡಿದ್ದ ಒಂದು ಕೇಸ್‌ಗೇ ಆತಂಕ ಸೃಷ್ಟಿಯಾಗಿತ್ತು. ಇದೀಗ ರಾಜ್ಯದಲ್ಲೇ 34 ಜೆಎನ್.1 ಕೇಸ್ ಪತ್ತೆಯಾಗಿದ್ದು, ಬೆಂಗಳೂರಿನಲ್ಲೇ ಒಟ್ಟು 20 ಜನರಲ್ಲಿ JN.1 ವೈರಸ್ ಕಂಡುಬಂದಿದೆ.
ಇತರ ಕಡೆಯ ಪ್ರಕರಣಗಳಲ್ಲಿ 4 ಮೈಸೂರು, 3 ಮಂಡ್ಯ, 1 ರಾಮನಗರ, 1 ಬೆಂಗಳೂರು ಗ್ರಾಮಾಂತರ, 1 ಕೊಡಗು, 1 ಚಾಮರಾಜನಗರದವು. ಒಟ್ಟು 192 ಜನರ ಗಂಟಲು ದ್ರವ ಜಿನೋಮಿಕ್ ಸಿಕ್ವೆನ್ಸ್‌ಗೆ ರವಾನೆ ಮಾಡಲಾಗಿತ್ತು. ಈ ಪೈಕಿ 60 ಸ್ಯಾಂಪಲ್‌ಗಳ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 34 ಜನರಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿದೆ. ಇನ್ನೂ 130 ಜನರ ಸ್ಯಾಂಪಲ್ ಪರೀಕ್ಷೆಯಾಗಬೇಕಿದೆ.
ಇಂದು ಮಹತ್ವದ ಸಭೆ..
ಇಂದು ಆರೋಗ್ಯ ಇಲಾಖೆ, ತಾಂತ್ರಿಕ ಸಲಹಾ ಸಮಿತಿ ಹಾಗೂ ಕೋವಿಡ್ ನಿಯಂತ್ರಣಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿಯಿಂದ ಸಭೆ ನಡೆಯಲಿದೆ. ಸಚಿವರಾದ ಎಚ್. ಸಿ.ಮಹದೇವಪ್ಪ, ಶರಣು ಪ್ರಕಾಶ್ ಪಾಟೀಲ್ ಹಾಗೂ ಎಂ.ಸಿ ಸುಧಾಕರ್ ಇರುವ ಸಮಿತಿ ಸಭೆ ನಡೆಸಲಿದ್ದು, ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.
ಸಭೆಯಲ್ಲಿ ಜೆಎನ್.1 ವೈರಾಣುವಿನ ತೀವ್ರತೆ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಲಿದೆ. ಸಮಿತಿ ವರದಿ ಆಧಾರದ ಮೇಲೆ ಮುಂದೆ ಯಾವೆಲ್ಲ ಕ್ರಮ ಜರುಗಿಸಬೇಕೆಂದು ಉಪಸಮಿತಿ ನಿರ್ಧರಿಸಲಿದೆ. ರಾಜ್ಯದ ಆರ್ಥಿಕ, ಸಾಮಾಜಿಕ ಪರಿಸ್ಥಿತಿ ನೋಡಿಕೊಂಡು ಗೈಡ್‌ಲೈನ್ಸ್ ರೂಪಿಸಬೇಕಿದೆ. ಹೊಸ ವರ್ಷಾಚರಣೆಗೂ ಅನ್ವಯ ಆಗುವಂತೆ ಮಾಸ್ಕ್ ಕಡ್ಡಾಯ ಮಾಡಿ ಆದೇಶ ಹೊರಡಿಸುವ ಸಾಧ್ಯತೆಯೂ ಇದೆ. ಸದ್ಯ ಮಾಸ್ಕ್ ಕಡ್ಡಾಯ ಹೊರತುಪಡಿಸಿ ಬೇರೆ ಕ್ರಮ ಜಾರಿ ಮಾಡುವ ಸಾಧ್ಯತೆಯಿಲ್ಲ.