ಬಟಾಣಿ : ಕೆಂಪು ಬಟಾಣಿ, ಹಸಿರು ಬಟಾಣಿ. ಈ ಎಲ್ಲಾ ಬಣ್ಣದ ಬಟಾಣಿಯನ್ನು ಹೆಕ್ಕಿ-ಹೆಕ್ಕಿ ತಿಂದದ್ದು ನೆನಪಿದೆಯೇ…? ಇಲ್ಲಿಯ ತನಕ ನೀವು ತಿಂದ ಇಂಥ ಬಟಾಣಿಯಿಂದಾಗಿ ಎಷ್ಟು ಕೇಜಿ ಬಣ್ಣ ನಿಮ್ಮ ಹೊಟ್ಟೆಯಲ್ಲಿರಬಹುದು…? ಅಬ್ಬಾ ಈ ವೈರಲ್ ವೀಡಿಯೋ ನೋಡಿದಾಗಿಂದಾ ಬಟಾಣಿ ಸಹವಾಸವೇ ಬೇಡ ಎನ್ನುವಂತಾಗಿದೆ.
ಹೌದು, ಚಿಕ್ಕಂದಿನಲ್ಲಿ ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ, ಪ್ಲಾಸ್ಟೀಕಿನ ಪುಟ್ಟ ಚೀಟಿನಲ್ಲಿ ಈ ಬಣ್ಣದ ಬಟಾಣಿಗಳನ್ನು ಶಾಲೆಯ ಅಕ್ಕ-ಪಕ್ಕದಲ್ಲಿ ಅಜ್ಜಿ ಮಾರುತ್ತಿದ್ದಾಗ ತೆಗೆದುಕೊಂಡು ತಿಂದು, ಮುಗಿಸಿ ಕೈಗೆ ಹತ್ತಿದ ಒಂದೊಂದು ಉಪ್ಪಿನ ಕಣಗಳನ್ನೂ ಬಿಡದೇ ನೆಕ್ಕಿ, ಟೀಚರ್ ಕ್ಲಾಸಿನೊಳಗೆ ಬರುವುದಕ್ಕೇ ಮೊದಲು ತೊಟ್ಟಿರುವ ಯುನಿಫಾರ್ಮ್‌ಗೆ ಚೆನ್ನಾಗಿ ಒರೆಸಿಕೊಂಡು ಸಂಭಾವಿತರಂತೆ ಕುಳಿತುಕೊಳ್ಳುತ್ತಿದ್ದ ಆ ದಿನಗಳು ಕಣ್ಮುಂದೆ ಬರುತ್ತದೆ. ಶಾಲೆಯ ಬಳಿಯ ತಳ್ಳುಗಾಡಿಗಳಿಂದ ಮತ್ತು ಕಾಕಾ ಅಂಗಡಿಗಳಿಂದ ಈ ಹಸಿರು ಮತ್ತು ಕೆಂಪು ಬಟಾಣಿಗಳನ್ನು ಖರೀದಿಸಿ ತಿನ್ನುತ್ತಿದ್ದದ್ದು ಬಾಲ್ಯದ ಸಂಭ್ರಮಗಳಲ್ಲಿ ಇದೂ ಕೂಡಾ ಒಂದಾಗಿದೆ. ಆದರೆ ಈ ಬಣ್ಣದ ಬಟಾಣಿಗಳನ್ನು ಹೇಗೆ ತಯಾರಿಸುತ್ತಾರೆ ಎಂದು ನಮಗೆ ಇಲ್ಲಿ ತನಕ ಗೊತ್ತೇ ಇರಲಿಲ್ಲ… ಈ ಬಣ್ಣ ಬಣ್ಣದ ಬಟಾಣೆಗಳನ್ನು ಹೇಗೆ ತಯಾರಿಸುತ್ತಾರೆ ಎಂಬುದಕ್ಕೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್….
ಅಸ್ಸಾಮ್ನ ಡಿಜಿಟಲ್ ಕ್ರಿಯೇಟರ್ ಮತ್ತು ಫುಡ್ ವ್ಲಾಗರ್ ಸಲೋನಿ ಬೋತ್ರಾ ಈ ವಿಡಿಯೋವನ್ನು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೂ. 21ರಂದು ಹಂಚಿಕೊಂಡ ಈ ವಿಡಿಯೋ ಸುಮಾರು ಏಳು ಮಿಲಿಯನ್ ಜನರಿಂದ ವೀಕ್ಷಿಸಲ್ಪಟ್ಟಿದೆ. 3 ಲಕ್ಷಕ್ಕೂ ಅಧಿಕ ಜನರು ಇದನ್ನು ಲೈಕ್ ಮಾಡಿದ್ದಾರೆ. ಲಕ್ಷಾಂತರ ಜನರು ಇಷ್ಟು ವರ್ಷಗಳ ಕಾಲ ತಿಂದಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾರೆ. ಇನ್ನೂ ಕೆಲವರು ಇನ್ನ್ಯಾವತ್ತೂ ಈ ಬಣ್ಣದ ಬಟಾಣಿಯನ್ನು ತಿನ್ನುವುದಿಲ್ಲ ಎಂದು ಮೂಗು ಮುರಿಯುತ್ತಿದ್ದಾರೆ.
ಈ ವೀಡಿಯೋವನ್ನು ವೀಕ್ಷಣೆ ಮಾಡಿದವರ ಪ್ರತಿಕ್ರಿಯೆ ಹೀಗಿದೆ. ಒಬ್ಬರು ಅಯ್ಯಯ್ಯೋ ನಾನು ನನ್ನ ಬಾಲ್ಯದಲ್ಲಿ ಈ ಬಟಾಣಿಯಿಂದಲೇ ಹೊಟ್ಟೆತುಂಬಿಸಿಕೊಳ್ಳುತ್ತಿದ್ದೆ ಎಂದರೆ. ಇನ್ನೊಬ್ಬರು ಬಾಲ್ಯದಲ್ಲಿ ಅಷ್ಟೇ ಯಾಕೆ ರೀ ನಾನು ದೊಡ್ಡವನಾದ ಮೇಲೂ ಈ ಬಣ್ಣದ ಬಟಾಣೆಯನ್ನ ತುಂಬಾ ತಿನ್ನುತ್ತಿದ್ದೆ ಎಂದಿದ್ದಾರೆ. ಇದಕ್ಕೂ ಮೀರಿ ಇಲ್ಲೊಬ್ಬರು ಪ್ರತಿಕ್ರಿಯಿಸಿ, ಇಷ್ಟು ದಿನದ ವರೆಗೆ ನಮ್ಮೆಲ್ಲರ ಹೊಟ್ಟೆಯೊಳಗೆ ಅದೆಷ್ಟು ಕೇಜಿ ಬಣ್ಣ ಹೋಗಿರಬಹುದು ಎಂದಿದ್ದಾರೆ. ಇನ್ನೂ ಕೆಲವೊಬ್ಬರು ನಮ್ಮಲ್ಲಿ ಕಾಣಿಸಿಕೊಳ್ಳುವ ಈ ಗ್ಯಾಸ್ಟ್ರಿಕ್ ಮತ್ತು ಎಸಿಡಿಟಿ ಸಮಸ್ಯೆಗೆ ಈ ಬಟಾಣಿಯೂ ಕಾರಣವಾಗಿರಬಹುದೆ? ಎಂದು ಪ್ರಶ್ನೆಯನ್ನ ಮುಂದಿಟ್ಟಿದ್ದಾರೆ.