ಲಾರಿಗಳಲ್ಲಿ ಡಿಸೇಲ್ ಕದಿಯುತ್ತಿದ್ದ ಕಳ್ಳರ ಮೇಲೆ ಬೆಳ್ಳಂಬೆಳಗ್ಗೆ ಜಿಗಣಿ ಪೊಲೀಸರು ಗುಂಡು ಹಾರಿಸಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ಸಮೀಪದ ಜಿಗಣಿ ಕೈಗಾರಿಕಾ ಪ್ರದೇಶದ ಕೆಇಬಿ ಸರ್ಕಲ್ ಬಳಿ ಬಳ್ಳಾರಿ ಮೂಲದ ಶ್ರೀನಿವಾಸ್ ಎಂಬಾತನ ಕಾಲಿಗೆ ಗುಂಡು ಹೊಡೆದಿದ್ದಾರೆ. ಮತ್ತೊರ್ವ ಸಹಚರ ಕಲಬುರಗಿ ಮೂಲದ ಚಾಲಕ ಮಲ್ಲನಗೌಡನನ್ನು ಬಂಧಿಸಲಾಗಿದೆ. ಇಂದು ಮುಂಜಾನೆ 5ಗಂಟೆ ಸುಮಾರಿಗೆ ಜಿಗಣಿ ಠಾಣೆ ಇನ್ಸ್ಪೆಕ್ಟರ್ ಸುದರ್ಶನ್ ಗಸ್ತು ತಿರುಗುತ್ತಿದ್ದ ವೇಳೆ KA03- 8931 ನಂಬರ್ ಟಾಟಾ ಸುಮೋ ಅನುಮಾನಾಸ್ಪದವಾಗಿ ಜಿಗಣಿ ರಿಂಗ್ ರೋಡ್ ಡಿಎಲ್ಎಫ್ ರಸ್ತೆ ಬಳಿ ಕಂಡಿದೆ. ಲಾರಿಯಿಂದ ಕ್ಯಾನ್ ಮೂಲಕ ಡಿಸೇಲ್ ತೆಗೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡಿದ್ದಾರೆ. ಪೊಲೀಸರನ್ನು ನೋಡುತ್ತಿದ್ದಂತೆ ಕಿರಣ್ ಹಾಗೂ ಇನ್ನೊಬ್ಬ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಇನ್ನಿಬ್ಬರು ಟಾಟಾ ಸುಮೋ ಮೂಲಕ ಎಸ್ಕೇಪ್ ಆಗಲು ಯತ್ನಿಸಿದಾಗ ಪೊಲೀಸ್ ಜೀಪಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದಾರೆ.
ಟಾಟಾ ಸುಮೋ ಚೇಸ್ ಮಾಡಿದ ಪೊಲೀಸರು ಜಿಗಣಿ ಕೆಇಬಿ ಸರ್ಕಲ್ ಬಳಿ ಟಾಟಾ ಸುಮೋವನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಚಾಲಕ ಮಲ್ಲನಗೌಡನನ್ನು ಹಿಡಿಯಲು ಹೋದ ಪೊಲೀಸ್ ಪೇದೆ ಕೊಟೇಶ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್ಪೆಕ್ಟರ್ ಸುದರ್ಶನ್ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆಗಲೂ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಾಗ ಟಾಟಾ ಸುಮೋ ಟೈರ್ ಗಳಿಗೆ ಗುಂಡು ಹೊಡೆದಿದ್ದಾರೆ.