ಐದು ರಾಜ್ಯಗಳ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ದೆಹಲಿಯಲ್ಲಿ ನಡೆಯುತ್ತಿದೆ. ಈ ಸಭೆಯಲ್ಲಿ ಮಹತ್ವದ ನಿರ್ಧಾರಗಳು ಪ್ರಕಟವಾಗುವ ಸಾಧ್ಯತೆ ಇದೆ. ಜಿ 23 ನಾಯಕರು ಪಕ್ಷದ ಆಂತರಿಕ ಚುನಾವಣೆಗಳನ್ನು ಮುನ್ನಡೆಸುವಂತೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಸಭೆ ನಡೆಯುತ್ತಿದೆ. ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಇತರ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಅಂಬಿಕಾ ಸೋನಿ, ಸಲ್ಮಾನ್ ಖುರ್ಷಿದ್, ಅಜಯ್ ಮಾಕನ್, ಪ್ರಿಯಾಂಕಾ ಗಾಂಧಿ, ಪಿ ಚಿದಂಬರಂ, ಅಶೋಕ್ ಗೆಹ್ಲೋಟ್, ಅಧಿರಾಜನ್ ಚೌಧರಿ, ಜಿತೇಂದ್ರ ಭವಾರ್ ಸಿಂಗ್, ಡಾ. ಅಜೋಯ್ ಕುಮಾರ್, ದಿಗ್ವಿಜಯ್ ಸಿಂಗ್, ಆನಂದ್ ಶರ್ಮಾ, ಭೂಪೇಶ್ ಭಾಗೇಲ್, ತಾರಿಕ್ ಅನ್ವರ್ ಮತ್ತು ಹರೀಶ್ ರಾವತ್ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲಿರುವ ನಾಯಕರು ಸ್ಮಾರ್ಟ್‌ಫೋನ್ ಕೊಂಡೊಯ್ಯುವಂತಿಲ್ಲ ಎನ್ನಲಾಗಿದೆ.
ಎಐಸಿಸಿ ಕೇಂದ್ರ ಕಚೇರಿಯೊಳಗೆ ಸಿಡಬ್ಲ್ಯುಸಿ ಸಭೆ ಪ್ರಾರಂಭವಾಗುತ್ತಿದ್ದಂತೆ, ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಕಚೇರಿಯ ಹೊರಗೆ ಜಮಾಯಿಸಿ ಗಾಂಧಿ ಕುಟುಂಬದ ಪರವಾಗಿ ಘೋಷಣೆಗಳನ್ನು ಕೂಗಿದ್ದಾರೆ. ರಾಹುಲ್ ಗಾಂಧಿಯನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿ ಎಂದು ಒತ್ತಾಯಿಸಿದ್ದಾರೆ.