ರಾಮನಗರದಲ್ಲಿ 15 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ ಹಾಸಿಗೆ ಇರುವುದೇ 10. ಈಗಾಗಲೇ ಇಬ್ಬರು ಸತ್ತು ಹೋಗಿದ್ದಾರೆ. ಇನ್ನಿಬ್ಬರು ಕಣ್ಣು ಕಳೆದುಕೊಂಡಿದ್ದಾರೆ. ನಮ್ಮನ್ನು ಉಳಿಸ್ಕೊಡಿ ಅಂತ ಹೇಳುತ್ತಿದ್ದಾರೆ. ನಾನು ಅವರನ್ನು ಉಳಿಸುವುದು ಹೇಗೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಗದ್ಗತಿರಾಗಿ ಸರಕಾರವನ್ನು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಲ್ಯಾಕ್ ಫಂಗಸ್ ಗೆ ಚಿಕಿತ್ಸೆ ಸಿಗುತ್ತಿಲ್ಲ. ನಮ್ಮ ರಾಮನಗರದಲ್ಲೇ ಐವರಿಗೆ ಬ್ಲಾಕ್ ಫಂಗಸ್ ಬಂದಿದೆ. ಅವರಲ್ಲಿ ಇಬ್ಬರು ಸತ್ತು ಹೋದ್ರು. ಉಳಿದ ಇಬ್ಬರು ಕಣ್ಣನೇ ಕಳೆದುಕೊಂಡ್ರು. ಏನಾದ್ರೂ ಮಾಡಿ ನಮ್ಮನ್ನ ಉಳಿಸಣ್ಣಾ ಅಂತಾರೆ. ನಾನು ಅವರನ್ನ ಉಳಿಸೋದು ಹೇಗೆ? ಇಂದು 15 ಜನರಿಗೆ ಬ್ಲಾಕ್ ಫಂಗಸ್ ಬಂದಿದೆ. 10 ಬೆಡ್ ಮಾತ್ರ ಸರ್ಕಾರ ಮಾಡಿದೆ ಎಂದರು.
ಆಕ್ಸಿಜನ್ ಕೊಡಿ ಅಂದ್ರೆ ಕೊಡೋದಿಲ್ಲ. 1200 ಟನ್ ಆಕ್ಸಿಜನ್ ಕೊಡಿ ಅಂತ ಕೋರ್ಟ್ ಹೇಳಿದೆ. 893 ಟನ್ ಮಾತ್ರ ಆಕ್ಸಿಜನ್ ಸಿಗುತ್ತಿದೆ. ಹೊರರಾಜ್ಯಕ್ಕೆ 339 ಟನ್ ಆಕ್ಸಿಜನ್ ಕಳುಹಿಸಿಕೊಡಲಾಗುತ್ತಿದೆ. ರಾಜ್ಯದಲ್ಲಿ 1136 ಟನ್ ಆಕ್ಸಿಜನ್ ಉತ್ಪಾದನೆ ಆಗುತ್ತಿದೆ. ಆದರೆ ನಮಗೆ ಸಿಗುತ್ತಿಲ್ಲ ಎಂದು ಅವರು ಆರೋಪಿಸಿದರು.
ಗಂಟೆಗಳ ಲೆಕ್ಕದಲ್ಲಿ ಆಕ್ಸಿಜನ್ ಮೀಟರ್ ಓಡುತ್ತಿದೆ. ಈಗಲೂ 25 ಗಂಟೆಗೆ ಆಕ್ಸಿಜನ್ ಸ್ಟಾಕ್ ಇಲ್ಲ. ಆಕ್ಸಿಜನ್ ಬದಲಿಸುವಾಗ ಇಬ್ಬರು, ಮೂವರು ಸಾಯುತ್ತಿದ್ದಾರೆ. ಐದು ಲೀಟರ್ ಕೊಡೋ ಕಡೆ ಮೂರು ಲೀಟರ್ ಆಕ್ಸಿಜನ್ ಕೊಡುತ್ತಿದ್ದಾರೆ. ಹಾಗಾಗಿ ಸಾವಿನ ಸಂಖ್ಯೆ ಹೆಚ್ಚಾಗ್ತಿದೆ ಎಂದು ಡಿ.ಕೆ. ಸುರೇಶ್ ವಿವರಿಸಿದರು.
ಮೊದಲು ಪ್ರತಿದಿನ 4 ಲಕ್ಷ ಲಸಿಕೆ ಕೊಡುತ್ತಿದ್ದರು. ಈಗ 80 ಸಾವಿರ ಲಸಿಕೆ ಕೊಡುತ್ತಿದ್ದಾರೆ. ಅವರಿಗೆ ಜನರ ಜೀವ ಉಳಿಸೋದು ಬೇಕಿಲ್ಲ. ಅವರಿಗೆ ಪ್ರಚಾರ ಅಷ್ಟೇ ಮುಖ್ಯ ಎಂದು ಅವರು ಕಿಡಿಕಾರಿದರು.
ಆರೋಗ್ಯ ಸಚಿವರಿಗೆ ಸುಳ್ಳು ಹೇಳುವುದೇ ಕೆಲಸ. ಅಧಿಕಾರ ಗಿಟ್ಟಿಸಿಕೊಂಡಿದ್ದೇ ಅವರ ಸಾಧನೆ. ಅದು ಬಿಟ್ಟು ಜನರ ಜೀವ ಉಳಿಸುವ ಕೆಲಸ ಮಾಡುತ್ತಿಲ್ಲ. ಚಿಕ್ಕಬಳ್ಳಾಪುರಕ್ಕೆ ಒಮ್ಮೆ ಹೋಗಿ ನೋಡಲಿ. ಹಳ್ಳಿಗಳಲ್ಲಿ ಜನ ಆಸ್ಪತ್ರೆ ಕಡೆ ಮುಖ ಹಾಕುತ್ತಿಲ್ಲ. ಮನೆಗಳಲ್ಲಿ ಅವಿತು ಕುಳಿತಿದ್ದಾರೆ. ಟೆಸ್ಟಿಂಗ್ ಪ್ರಮಾಣ ಮುಚ್ಚಿಡುತ್ತಿದ್ದಾರೆ. ಮುಚ್ಚಿಟ್ಟರೆ ರಾಜ್ಯದ ಜನರ ಜೀವ ಉಳಿಯಲ್ಲ ಎಂದು ಅವರು ಹೇಳಿದರು.
ಸುಳ್ಳು ಹೇಳುವುದೇ ಬಿಜೆಪಿ ನಾಯಕರ ಕೆಲಸ. ಚಪ್ಪಾಳೆ ಹೊಡೆಯಿರಿ, ಗಂಟೆ ಬಾರಿಸಿ, ತಟ್ಟೆ ಬಡಿಯಿರಿ ಎಂದರು. ದೀಪ ಹಚ್ಚಿ ಎಂದು ಜನರ ಮನೆಯ ದೀಪವನ್ನೇ ಆರಿಸಿದರು. ಇವತ್ತು ತಂದೆ, ತಾಯಿ, ಮಕ್ಕಳು ಕಣ್ಮುಂದೆ ಸಾಯ್ತಿದ್ದಾರೆ. ಇಂದು ಜನರಿಗೆ ಏನು ಕೊಟ್ಟಿದ್ದೀರಿ? ಗಂಗಾ ನದಿಯಲ್ಲಿ ಹೆಣಗಳು ತೇಲಿಬರುತ್ತಿವೆ. ಹೆಣವನ್ನ ಸುಟ್ಟು ಬೂದಿಯನ್ನ ಕೊಡುತ್ತಿದ್ದಿರ? ಹೆಣ ಸುಡೋಕೂ 50 ಸಾವಿರ ಪ್ಯಾಕೇಜ್. ಬೂದಿ ಪಡೆಯೋಕು ೫೦ ಸಾವಿರ ನೀಡಬೇಕು. ಇದು ಬಿಜೆಪಿ ಸರ್ಕಾರದ ಕೊಡುಗೆ ಎಂದು ಅವರು ಲೇವಡಿ ಮಾಡಿದರು.