ಹೊಡೆಯುವ ಟೀಚರ್ ನನ್ನು ಬಂಧಿಸುವಂತೆ 2ನೇ ತರಗತಿ ವಿದ್ಯಾರ್ಥಿಯೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಪೊಲೀಸ್ ಠಾಣೆಗೆ ಆಗಮಿಸಿದ 2ನೇ ತರಗತಿ ವಿದ್ಯಾರ್ಥಿ ಅನಿಲ್ ನಾಯ್ಕ್ ನನ್ನು ನೋಡಿದ ಲೇಡಿ ಇನ್ ಸ್ಪೆಕ್ಟರ್ ಯಾಕೆ ಇಲ್ಲಿಗೆ ಬಂದೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಆ ಹುಡುಗ ಟೀಚರ್ ನನ್ನು ಅರೆಸ್ಟ್ ಮಾಡಿ ಎಂದು ಕೇಳಿದ್ದಾನೆ. ಯಾಕೆ ಎಂದು ಕೇಳಿದರೆ ನನಗೆ ಹೊಡಿತಾರೆ ಎಂದಿದ್ದಾನೆ. ಯಾಕೆ ಹೊಡೆದರು ಅಂದರೆ ನಾನು ಸರಿಯಾಗಿ ಓದುತ್ತಿಲ್ಲ ಅಂತ ಹೊಡೆಯುತ್ತಾರೆ ಎಂದು ಹೇಳಿದ್ದಾನೆ.
ಮಗುವಿನ ಮಾತು ಕೇಳಿದ ಮಹಿಳಾ ಇನ್ ಸ್ಪೆಕ್ಟರ್ ರಮಾದೇವಿ, ಟೀಚರ್ ಈ ವಿದ್ಯಾರ್ಥಿ ಅಲ್ಲದೇ ಬೇರೆಯವರಿಗೂ ಹೊಡೆಯುತ್ತಾರಾ ಎಂದು ವಿಚಾರಣೆ ನಡೆಸಿದ್ದಾರೆ. ಆದರೆ ಇವನನ್ನು ಬಿಟ್ಟು ಮತ್ತಾರಿಗೂ ಹೊಡೆದಿಲ್ಲ ಎಂಬುದು ತಿಳಿದು ಬಂದಿದೆ.
ತೆಲಂಗಾಣದ ಮೆಹಬೂಬ್ ನಗರದ ಬಯ್ಯಾರಾಮ್ ಪ್ರದೇಶದ ಖಾಸಗಿ ಶಾಲೆಯಲ್ಲಿ ಅನಿಲ್ ನಾಯ್ಕ್ 2ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಮಗುವಿನ ಮಾತನ್ನು ತಾಳ್ಮೆಯಿಂದ ಆಲಿಸಿದ ಇನ್ ಸ್ಪೆಕ್ಟರ್ ರಮಾದೇವಿ, ಶಾಲೆಗೆ ಕರೆದೊಯ್ದು ಆತನನ್ನು ಓಲೈಸಲು ಎಷ್ಟು ಪ್ರಯತ್ನಿಸಿದರೂ ಆತ ಹಠಕ್ಕೆ ಬಿದ್ದಿದ್ದ. ನಂತರ ಕೌನ್ಸಿಲಿಂಗ್ ಮೂಲಕ ಮಗುವಿಗೆ ತಿಳಿ ಹೇಳಲಾಗಿದ್ದು, ಸಮಸ್ಯೆಯನ್ನು ಬಗೆಹರಿಸಲಾಯಿತು.