ಅತ್ಯಂತ ನಿಖರವಾಗಿ ಗುರಿ ತಲುಪುವ ಖ್ಯಾತಿ ಹೊಂದಿರುವ ಅಮೆರಿಕದ ಜಾವೆಲಿನ್ ಕ್ಷಿಪಣಿ ಉಕ್ರೇನ್ ಯೋಧರ ಕೈ ಸೇರಿದ್ದು, ಇದು 300 ಕ್ಷಿಪಣಿಗಳನ್ನು ಚಿಮ್ಮಿಸಿದ್ದು, ರಷ್ಯಾದ 280 ಯುದ್ಧ ಟ್ಯಾಂಕ್ ಗಳನ್ನು ಧ್ವಂಸ ಮಾಡಿವೆ.
ರಷ್ಯಾ ಸೈನಿಕರು ನುಗ್ಗಿ ಸತತ ದಾಳಿ ನಡೆಸುತ್ತಿರುವುದರಿಂದ ಕಂಗೆಟ್ಟಿದ್ದ ಉಕ್ರೇನ್ ಸೈನಿಕರು ಇದೀಗ ಅಮೆರಿಕದ ಹೊಸ ಅಸ್ತ್ರ ಕೈ ಸೇರುತ್ತಿದ್ದಂತೆ ಪ್ರತಿದಾಳಿಯನ್ನು ತೀವ್ರಗೊಳಿಸಿದ್ದು, ರಷ್ಯಾ ಸೇನೆ ದಿಕ್ಕೆಡುವಂತೆ ಮಾಡಿದೆ.
ಅಮರಿಕದಿಂದ ಬಂದಿರುವ ಜಾವೆಲಿನ್ ಕ್ಷಿಪಣಿಗಳು ಯೋಧರೇ ಗುರಿ ಇಟ್ಟು ಚಿಮ್ಮಿಸುವ ಅಸ್ತ್ರವಾಗಿದೆ. ಇದುವರೆಗೂ 300 ಕ್ಷಿಪಣಿಗಳನ್ನು ಬಳಸಲಾಗಿದ್ದು, ಕನಿಷ್ಠ 280 ರಷ್ಯಾದ ಯುದ್ಧ ಟ್ಯಾಂಕ್ ಗಳನ್ನು ಧ್ವಂಸ ಮಾಡಲಾಗಿದೆ ಎಂದು ಸ್ಥಳೀಯ ವರದಿಗಾರರು ವರದಿ ಮಾಡಿದ್ದಾರೆ. ಅಂದರೆ ಇದು ಶೇ.93ರಷ್ಟು ಯಶಸ್ವಿಯಾಗಿದೆ.
75 ದಶಲಕ್ಷ ಡಾಲರ್ ಒಪ್ಪಂದದ ಪ್ರಕಾರ 2018ರಲ್ಲಿ ಮೊದಲ ಬಾರಿ ಉಕ್ರೇನ್ ಗೆ ಜಾವೆಲಿನ್ ಕ್ಷಿಪಣಿಗಳನ್ನು ಅಮೆರಿಕ ಕಳುಹಿಸಿಕೊಟ್ಟಿತ್ತು. ಈಗ ಅದು ಉಕ್ರೇನ್ ಸೈನಿಕರು ಅದರಲ್ಲೂ ಭೂ ಸೈನಿಕರ ಪ್ರಮುಖ ಅಸ್ತ್ರವಾಗಿದೆ.