ಮಂಗಳೂರಿನ ಸುರತ್ಕಲ್ ಹೆದ್ದಾರಿಯಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ನಡೆದಿರುವುದು ಬೆಳಕಿಗೆ ಬಂದಿದೆ. ಮಲ್ಪೆ ಬೀಚ್ ಗೆ ತೆರಳಿ ವಾಪಸಾಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಯುವಕರ ಗುಂಪು ಮುಗಿಬಿದ್ದಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲು ಮುಂದಾಗಿದೆ.
ಬೊಲೆರೋ ವಾಹನದಲ್ಲಿ ದೇರಳಕಟ್ಟೆಯ ಖಾಸಗಿ ಕಾಲೇಜಿನ ಮೆಡಿಕಲ್ ವಿದ್ಯಾರ್ಥಿಗಳು ಸೇರಿದಂತೆ ಯುವಕ- ಯುವತಿಯರು ಮಲ್ಪೆ ಬೀಚ್ ಗೆ ತೆರಳಿ ಮಂಗಳೂರಿನತ್ತ ಬರುತ್ತಿದ್ದರು. ಈ ವೇಳೆ ಯುವಕರ ಗುಂಪು ಅಡ್ಡಗಟ್ಟಿದ್ದು ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಲು ಮುಂದಾಗಿದೆ.
ಈ ವೇಳೆ, ಸಿವಿಲ್ ಡ್ರೆಸ್ ನಲ್ಲಿದ್ದ ಮಂಗಳೂರಿನ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ಯುವಕರನ್ನು ತಡೆದಿದ್ದು ಹೊಡೆಯಬೇಡಿ ಎನ್ನುತ್ತಾ ಯುವಕರನ್ನು ಅಂಗಲಾಚಿದ್ದಾರೆ. ಆದರೆ ಯುವಕರು ಪೊಲೀಸ್ ಅಧಿಕಾರಿಯ ಮಾತು ಕೇಳದೆ ಬೊಲೆರೋ ವಾಹನಕ್ಕೆ ಕೈ ತುರುಕಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಇದರ ವಿಡಿಯೋವನ್ನು ಸ್ಥಳೀಯರು ರೆಕಾರ್ಡ್ ಮಾಡಿದ್ದು ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.
ವಿಡಿಯೋ ಭಾರೀ ವೈರಲ್ ಆಗಿದ್ದು ಇದರ ಬೆನ್ನಲ್ಲೇ ಸುರತ್ಕಲ್ ಪೊಲೀಸರು ಐವರನ್ನ ವಶಕ್ಕೆ ಪಡೆದಿದ್ದಾರೆ. ಹಲ್ಲೆ ನಡೆಸಿದ್ದ ಐವರು ಯುವಕರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನೈತಿಕ ಪೊಲೀಸ್ ಗಿರಿ ವಿಚಾರದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು ಹೊರವಲಯದ ಸುರತ್ಕಲ್ ಟೋಲ್ ಗೇಟ್ ಬಳಿ ಘಟನೆ ನಡೆದಿದ್ದು ಯುವಕರ ಗೂಂಡಾಗಿರಿ ವಿಡಿಯೋದಲ್ಲಿ ಸೆರೆಯಾಗಿದ್ದು ಅದನ್ನು ಆಧರಿಸಿ ಪೊಲೀಸರು ಕ್ರಮ ಜರುಗಿಸಿದ್ದಾರೆ. ವಾಹನದಲ್ಲಿ ಅನ್ಯಕೋಮಿನ ವಿದ್ಯಾರ್ಥಿಗಳು ಇದ್ದರು ಅನ್ನುವ ಮಾಹಿತಿ ಹಿನ್ನೆಲೆ ಯುವಕರು ಗೂಂಡಾಗಿರಿ ಮೆರೆದಿದ್ದಾರೆ.