ಕೊರೊನಾ ಎರಡನೇ ಅಲೆಯ ನಂತರ ಸೋಂಕು ಮತ್ತು ಸಾವಿನ ಪ್ರಮಾಣ ಹೆಚ್ಚಾಗಿದ್ದರೂ ಶೇ.50ರಷ್ಟು ಜನರು ಈಗಲೂ ಮಾಸ್ಕ್ ಧರಿಸುತ್ತಿಲ್ಲ ಎಂದು ಕೇಂದ್ರ ಸರಕಾರ ಅಸಮಾಧಾನ ವ್ಯಕ್ತಪಡಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಮುಖ್ಯ ಕಾರ್ಯದರ್ಶಿ ಲವ್ ಅಗರ್ ವಾಲ್ ಗುರುವಾರ ಈ ವಿಷಯ ತಿಳಿಸಿದ್ದು, ಸಮೀಕ್ಷೆ ಪ್ರಕಾರ ಶೇ.50ರಷ್ಟು ಜನರು ಈಗಲೂ ಮಾಸ್ಕ್ ಧರಿಸುತ್ತಿಲ್ಲ. ಶೇ.64ರಷ್ಟು ಜನರು ಮೂಗಿನ ಕೆಳಗೆ ಮಾಸ್ಕ್ ಧರಿಸುತ್ತಿರುವುದು ಕಂಡು ಬಂದಿದೆ ಎಂದರು.
8 ರಾಜ್ಯಗಳಲ್ಲಿ ಈಗಲೂ 1 ಲಕ್ಷಕ್ಕಿಂತ ಅಧಿಕ ಸಕ್ರಿಯ ಪ್ರಕರಣಗಳಿವೆ. 9 ರಾಜ್ಯಗಳಲ್ಲಿ 50 ಸಾವಿರಕ್ಕಿಂತ ಅಧಿಕ ಸಕ್ರಿಯ ಪ್ರಕರಣಗಳಿವೆ. 15 ರಾಜ್ಯಗಳಲ್ಲಿ 50 ಸಾವಿರಕ್ಕಿಂತ ಕಡಿಮೆ ಸೋಂಕು ಪ್ರಕರಣಗಳಿವೆ ಎಂದು ಅವರು ವಿವರಿಸಿದರು.
ದೇಶದಲ್ಲಿ ಪ್ರತಿ ವಾರ ಕೊರೊನಾ ಪರೀಕ್ಷೆ ಪ್ರಮಾಣ ಹೆಚ್ಚಿಸಲಾಗುತ್ತಿದೆ. ಕರ್ನಾಟಕದಲ್ಲಿ ಪರೀಕ್ಷೆ ಪ್ರಮಾಣ ಇಳಿಕೆಯಾಗಿದ್ದು, ಅದನ್ನು ಹೆಚ್ಚಿಸುವಂತೆ ಸೂಚಿಸಲಾಗಿದೆ. ಈಗಾಗಲೇ 23 ಕೋಟಿ ಜನರಿಗೆ ಪರೀಕ್ಷೆ ಮಾಡಲಾಗಿದೆ ಎಂದು ಲವ್ ಅಗರ್ ವಾಲ್ ಹೇಳಿದರು.