ಭಾರತ ಮತ್ತು ಇಂಗ್ಲೆಂಡ್ ನಡುವಣ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೇಲೆ ಕೊರೊನಾ ಮತ್ತು ಮಳೆಯ ಕರಿನೆರಳು ಬಿದ್ದಿದ್ದು, ಈ ಪಂದ್ಯ ನಡೆಯುವ ಸಾಧ್ಯತೆ ಬಗ್ಗೆ ಚರ್ಚೆಗಳು ನಡೆದಿವೆ.
ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಸೇರಿದಂತೆ ತಂಡದ ನಾಲ್ವರು ಸಹಾಯಕ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಅಲ್ಲದೇ ತಂಡದ ಫಿಜಿಯೊ ಕೂಡ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಮತ್ತೊಂದೆಡೆ ಪಂದ್ಯ ನಡೆಯುವ ಮ್ಯಾಂಚೆಸ್ಟರ್ ನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತ ತಂಡ ಸೋಲಿನ ದವಡೆಯಿಂದ ಪಾರಾಗಿ ನಾಲ್ಕನೇ ಟೆಸ್ಟ್ ಪಂದ್ಯವನ್ನು 157 ರನ್ ಗಳ ಭಾರೀ ಅಂತರದಿಂದ ಜಯಭೇರಿ ಬಾರಿಸಿದ್ದೂ ಅಲ್ಲದೇ ಟೆಸ್ಟ್ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ. ಇದೀಗ ಪಂದ್ಯ ನಡೆದು ಡ್ರಾಗೊಂಡರೆ ಅಥವಾ ರದ್ದಾದರೂ ಭಾರತ ಇಂಗ್ಲೆಂಡ್ ನೆಲದಲ್ಲಿ ಸರಣಿ ಗೆಲುವಿನ ಐತಿಹಾಸಿಕ ಸಾಧನೆ ಮಾಡಲಿದೆ.
ಭಾರತ ತಂಡ ಅದ್ಭುತ ಗೆಲುವಿನಿಂದ ಉತ್ಸಾಹದಲ್ಲಿದ್ದು, ಜಸ್ ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿ ಮತ್ತೊಬ್ಬ ವೇಗಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಇದರ ನಡುವೆ ಟೆಸ್ಟ್ ಕ್ರಿಕೆಟ್ ನಲ್ಲಿ 413 ವಿಕೆಟ್ ಪಡೆದು ದಾಖಲೆ ಹೊಂದಿರುವ ಅಶ್ವಿನ್ ಇಡೀ ಸರಣಿಯಲ್ಲಿ ಬೆಂಚು ಕಾಯಿಸಬೇಕಾದ ಸ್ಥಿತಿಯಲ್ಲಿದ್ದಾರೆ. ಏಕೆಂದರೆ ರವೀಂದ್ರ ಜಡೇಜಾ ನಿರೀಕ್ಷಿತ ಪ್ರದರ್ಶನ ನೀಡದೇ ಇದ್ದರೂ ಗೆಲುವಿನ ಭಾಗವಾಗಿರುವುದರಿಂದ ಅವರನ್ನು ಉಳಿಸಿಕೊಳ್ಳಲುವ ಮುನ್ಸೂಚನೆ ನೀಡಿದೆ.
ಇದೇ ವೇಳೆ ಇಂಗ್ಲೆಂಡ್ ತಂಡದಲ್ಲಿ ಬದಲಾವಣೆ ಸಾಧ್ಯತೆ ಇದ್ದು, ಗಾಯಗೊಂಡಿರುವ ಹಿರಿಯ ವೇಗಿ ಜೇಮ್ಸ್ ಆಂಡರ್ಸನ್ ಹೊರಗುಳಿದರೆ ಸ್ಟುವರ್ಟ್ ಬ್ರಾಡ್ ಆಗಮಿಸುವ ಸಾಧ್ಯತೆ ಇದೆ.