ಕೋವಿಡ್ ನಿರ್ವಹಣೆಯ ಬಗ್ಗೆ ಇದೇ ಮೊದಲ ಬಾರಿ ಜನರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಆರೋಗ್ಯ ಇಲಾಖೆಯ ಕಾರ್ಯವೈಖರಿ, ಆಸ್ಪತ್ರೆಗಳಲ್ಲಿ ಚಿಕಿತ್ಸಾ ವ್ಯವಸ್ಥೆ, ಆಕ್ಸಿಜನ್ ಕೊರತೆಯಿಂದ ದೇಶದ ಆರೋಗ್ಯ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ ಎಂದು ಶೇ.61ರಷ್ಟು ಜನರು ಆಕ್ರೋಶಗೊಂಡಿದ್ದಾರೆ.
ಸಿಟಿಜನ್ ಎಂಗೇಜ್ ಮೆಂಟ್ ಲೋಕಲ್ ಕ್ರೈಸಿಸ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ದೇಶದಲ್ಲಿ ಆಕ್ಸಿಜನ್ ಕೊರತೆ, ಬೆಡ್ ಕೊರತೆ, ಅವ್ಯವಸ್ಥೆ, ಭ್ರಷ್ಟಾಚಾರ, ಆಡಳಿತ ನಿರ್ವಹಣೆಯಲ್ಲಿನ ವೈಫಲ್ಯದಿಂದ ಜನರು ಕೋವಿಡ್ ಜೊತೆಗೆ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಶೇ.61ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
8131 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಶೇ.23ರಷ್ಟು ಜನರು ಕೋವಿಡ್ ಪರಿಸ್ಥಿತಿಯಿಂದ ಆತಂಕ ಹಾಗೂ ಭಯಭೀತರಾಗಿರುವುದಾಗಿ ಹೇಳಿಕೊಂಡರೆ ಶೇ.8ರಷ್ಟು ಮಂದಿ ಬೇಸರ, ನಿರಾಸೆಗೊಂಡಿರುವುದಾಗಿ ತಿಳಿಸಿದ್ದಾರೆ.
ಶೇ.28ರಷ್ಟು ಮಂದಿ ಆಕ್ರೋಶಗೊಂಡಿದ್ದರೆ, ಶೇ.10ರಷ್ಟು ಜನರು ತೀವ್ರವಾದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೇ.28ರಷ್ಟು ಮಂದಿ ಆಶಾಭಾವನೆ ಮತ್ತು ಭರವಸೆ ಹೊಂದಿದ್ದರೆ ಶೇ.7ರಷ್ಟು ಮಂದಿ ಸಮಾಧಾನ ಹೊಂದಿದ್ದಾರೆ. ದೇಶದಲ್ಲಿನ ಕೋವಿಡ್ ಪರಿಸ್ಥಿತಿ ನಿರ್ವಹಣೆ ಕುರಿತು ಶೇ.41 ಮಂದಿ ತೃಪ್ತಿ ವ್ಯಕ್ತಪಡಿಸಿದ್ದರೆ, ಶೇ.45ರಷ್ಟು ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೇ.14ರಷ್ಟು ಮಂದಿ ಈ ಬಗ್ಗೆ ಗಮನ ಹರಿಸಿಲ್ಲ ಎಂದಿದ್ದಾರೆ.