ಬೆಂಗಳೂರು : ಹೊರ ರಾಜ್ಯದ ಪ್ರಯಾಣಕ್ಕೆ ನಕಲಿ ಕೋವಿಡ್ ರಿಪೋರ್ಟ್ ಕೊಡುತ್ತಿದ್ದ ವ್ಯಕ್ತಿಯೊಬ್ಬನನ್ನು ಉಪ್ಪಾರ ಪೇಟೆ ಪೊಲೀಸರು ಬಂಧಿಸಿದ್ದಾರೆ. ಸಂಪತ್ ಲಾಲ್ ಎಂಬುವನನ್ನ ಬಂಧಿಸಿದ್ರೆ ಮತ್ತೊಬ್ಬ ಆರೋಪಿ ಪರಾರಿ ಆಗಿದ್ದಾನೆ. ಅಕ್ಕಿಪೇಟೆ ನಿವಾಸಿಯಾಗಿರುವ ಸಂಪತ್ ಲಾಲ್, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳಕ್ಕೆ ಹೋಗೋರಿಗೆ ನಕಲಿ ನೆಗೆಟಿವ್ ರಿಪೋರ್ಟ್ ಕೊಡುತ್ತಿದ್ದ ಎನ್ನಲಾಗಿದೆ.
ಇದರ ಮಾಹಿತಿ ಕಲೆ ಹಾಕಿದ ಪೊಲೀಸರು ಸಂಪತ್ ಲಾಲ್ ನನ್ನ ವಶಕ್ಕೆ ಪಡೆದು ತನಿಖೆ ನಡೆಸಿದಾಗ ಈತ ನಕಲಿ ವೈದ್ಯರ ಹೆಸರು, ಸೀಲ್, ವೈದ್ಯರಿಂದ ದೃಢೀಕರಣದ ರೀತಿಯ ರಿಪೋರ್ಟ್ ತಯಾರಿಸುತ್ತಿದ್ದ. ಒಂದು ನಕಲಿ ನೆಗೆಟಿವ್ ರಿಪೋರ್ಟ್ ಗೆ 3 – 4ಸಾವಿರ ರೂ ಪಡೆಯುತ್ತಿದ್ದ. 15 ದಿನಗಳಲ್ಲಿ ಅನೇಕ ಪ್ರಯಾಣಿಕರಿಗೆ ನಕಲಿ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಕೊಟ್ಟಿದ್ದ. ಈತನಿಂದ ನಕಲಿ ಕೋವಿಡ್ ನೆಗೆಟಿವ್ ರಿಪೋರ್ಟ್ ಪಡೆದು ಅನೇಕರು ಬೇರೆ ರಾಜ್ಯಗಳಿಗೆ ಪ್ರಯಾಣಿಸಿದ್ದರು.
ಉಪ್ಪಾರಪೇಟೆ ಪೊಲೀಸರು ಮೂರು ನಕಲಿ ಕೋವಿಡ್ ನೆಗಿಟಿವ್ ಸರ್ಟಿಫಿಕೇಟ್, ಒಂದು ಮೊಬೈಲ್ ಪೋನ್ ನನ್ನು ವಶಕ್ಕೆ ಪಡೆದಿದ್ದಾರೆ. ನಕಲಿ ಕೊರೊನಾ ನೆಗೆಟಿವ್ ರಿಪೋರ್ಟ್ ಬಳಕೆ ಬಗ್ಗೆ ಆಯಾ ರಾಜ್ಯದ ಪೊಲೀಸರಿಗೆ ಮಾಹಿತಿ ರವಾನೆ ಮಾಡಿದ್ದಾರೆ. ಸಂಪತ್ ಲಾಲ್ ಈ ಮೊದಲು ರೈಲ್ವೆ ಮತ್ತು ವಿಮಾನ ಟಿಕೆಟ್ ಬುಕ್ ಮಾಡುತ್ತಿದ್ದ. ಇತ್ತೀಚೆಗೆ ರೈಲ್ವೆ ಟಿಕೇಟ್ ಬುಕ್ಕಿಂಗ್ ಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ ಎಂದು ಗೊತ್ತಾದಾಗ ಈ ದಂಧೆಗೆ ಇಳಿದಿದ್ದ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.