ಹಾಸನ : ಕೊರೊನಾದಿಂದಾಗಿ ಅನೇಕರು ಪ್ರಾಣ ಕಳೆದುಕೊಂಡರೆ, ಕೆಲವರ ಬದುಕು ಹೇಳತೀರದಾಗಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಲಾಕ್ ಡೌನ್ ಹೇರಿದೆ. ಇದು ಹಲವರ ಉದ್ಯೋಗವನ್ನೇ ಕಸಿದುಕೊಂಡಿದೆ. ಇಲ್ಲೊಬ್ಬ ಬಡ ಕಾರ್ಮಿಕ ತನ್ನ ಊರು ತಲುಪಲು ವಾಹನಗಳಿಲ್ಲದೆ, ಟ್ಯಾಕ್ಸಿಗಳಿಗೆ ಬಾಡಿಗೆ ನೀಡುವಷ್ಟು ಹಣವೂ ಇಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ರಸ್ತೆ ಬದಿ ಹಾಕಿದ್ದ ಕಸದ ರಾಶಿಯಲ್ಲಿದ್ದ ಅನ್ನದ ಅಗುಳನ್ನು ಹುಡುಕಿ ತಿನ್ನುತ್ತಿದ್ದ ಹೃದಯ ವಿದ್ರಾವಕ ಘಟನೆ ಆಲೂರು ತಾಲೂಕಿನ ಕೋನಪೇಟೆ ರಸ್ತೆಯಲ್ಲಿ ನಡೆದಿದೆ.
ಅರಸೀಕೆರೆ ತಾಲೂಕು ತಂತನಹಳ್ಳಿ ಕೆರೆ ಗ್ರಾಮದ ರಾಜು (38) ಎಂಬ ವ್ಯಕ್ತಿ ಹೊಟ್ಟೆ ಹಸಿವು ತಾಳಲಾರದೆ ರಸ್ತೆ ಬದಿ ಬಿದ್ದಿದ್ದ ಕಸದ ರಾಶಿಯಲ್ಲಿದ್ದ ಅನ್ನವನ್ನು ತಿನ್ನುತ್ತಿದ್ದನು. ಇದನ್ನು ಗಮನಿಸಿದ ದಾರಿಹೊಕರೊಬ್ಬರು ಆತನನ್ನು ವಿಚಾರಿಸಿದ್ದಾರೆ.
ಹೊಟ್ಟೆ ಹಸಿವು ತಾಳಲಾರದೆ ಕಸದಲ್ಲಿ ಬಿದ್ದಿದ್ದ ಅನ್ನದ ಅಗುಳನ್ನು ಆಯ್ದು ತಿನ್ನುತ್ತಿದ್ದೇನೆ. ಶುಂಠಿ ತೋಟದ ಕೆಲಸಕ್ಕೆಂದು ಒಂದು ವರ್ಷದ ಹಿಂದೆ ಆಲೂರಿಗೆ ಬಂದಿದ್ದೆ. ಆದರೆ, ಈಗ ಕೆಲಸ ಇಲ್ಲದಂತಾಗಿದೆ. ವಾಪಾಸ್ ಊರಿಗೆ ಹೋಗಲು ನನ್ನ ಬಳಿ ಹಣವಿಲ್ಲ. ಎರಡು ದಿನದಿಂದ ಊಟವಿಲ್ಲದೆ ಹೊಟ್ಟೆ ಹಸಿವು ತಡೆಯಲಾಗಲಿಲ್ಲ. ಪರಿಚಿತರು ಎಂದು ಹೇಳಿಕೊಳ್ಳಲು ನನಗೆ ಯಾರೂ ಇಲ್ಲ ಎಂದು ರಾಜು ಕಣ್ಣೀರು ಹಾಕಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಅಗಮಿಸಿದ ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಆನಂದ್ ಮನೆಯಿಂದ ಊಟ ತಂದು ಬಡಿಸಿದ್ದಾರೆ. ನಂತರ ತಾಲೂಕು ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಅವರಿಗೆ ಕರೆ ಮಾಡಿದ್ದು, ಸಿಬ್ಬಂದಿ ಜೊತೆಗೆ ಬಂದ ಅವರು ರಾಜು ಅವರಿಗೆ ಕೊರೊನಾ ಪರೀಕ್ಷೆ ನಡೆಸಿದರು. ನಂತರ ಆನಂದ್ ಅವರೇ ತಮ್ಮ ಮನೆಗೆ ರಾಜುನನ್ನು ಕರೆದುಕೊಂಡು ಹೋಗಿದ್ದು ಗಾರೆ ಕೆಲಸ ನೀಡುವುದಾಗಿ ಹೇಳಿದ್ದಾರೆ.