ತುಮಕೂರು: ಮಹಾಮಾರಿ ಕೊರೊನಾ ತಮ್ಮ ಗ್ರಾಮಕ್ಕೆ ಬಾರದಿರಲಿ ಎಂದು ಪ್ರಾರ್ಥಿಸಿ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕೆ.ರಾಮಪುರ ಗ್ರಾಮಸ್ಥರು ಗ್ರಾಮ ರಕ್ಷಣಾ ಕಲ್ಲಿಗೆ ಪೂಜೆ ಸಲ್ಲಿಸಿದ್ದಾರೆ.
ಒಂದು ವೇಳೆ ಗ್ರಾಮಕ್ಕೆ ಕೊರೊನಾ ಪ್ರವೇಶಿಸಿದರೂ ಯಾವುದೇ ರೀತಿಯ ಸಾವು-ನೋವು ಆಗಬಾರದೆಂದು ಬೇಡಿಕೊಂಡು ಪ್ರಕೃತಿ ಮೊರೆ ಹೋಗಿದ್ದಾರೆ.
ಕೆ. ರಾಮಪುರ ಗ್ರಾಮದಲ್ಲಿ ಈ ಹಿಂದೆ ಮಾರಣಾಂತಿಕ ರೋಗಗಳು, ಪ್ರಕೃತಿ ವಿಕೋಪಗಳು ನಡೆದಿದ್ದಾಗ ಸಾವು-ನೋವು ಉಂಟಾಗದಂತೆ ಗ್ರಾಮ ರಕ್ಷಣಾ ಕಲ್ಲಿಗೆ ಪೂಜೆ ಮಾಡುವುದು ವಾಡಿಕೆ. ಹೀಗಾಗಿ ಗ್ರಾಮದ ಸಮೀಪ ಹನುಮನ ಬೆಟ್ಟದಲ್ಲಿನ ಗ್ರಾಮ ರಕ್ಷಣಾ ಕಲ್ಲಿಗೆ 101 ಬಿಂದಿಗೆ ನೀರು, 101 ನಿಂಬೆಕಾಯಿ ಇಟ್ಟು ಪೂಜೆ ಸಲ್ಲಿಸಲಾಯಿತು.
ಹೀಗೆ ಮಾಡಿದಗಲೆಲ್ಲ ಯಾವ ಕಾಯಿಲೆಯೂ ಹರಡಿಲ್ಲ ಎಂಬುದು ಗ್ರಾಮಸ್ಥರ ನಂಬಿಕೆ ಇದೆ. ಹನುಮನ ಬೆಟ್ಟದ ಅಕ್ಕಮ್ಮ ಗಾರ್ಲುದೇವಿಯ ದೋಣಿಯಲ್ಲಿನ ನೀರು ತಂದು ಮನೆಗಳಿಗೆ ಚೆಲ್ಲಿದರೆ ಕಾಯಿಲೆ ನಿವಾರಣೆಯಾಗುತ್ತವೆ ಎಂಬ ನಂಬಿಕೆಯೂ ಇದೆ. ಇದರಂತೆ ಕೊರೊನಾನೂ ಬರುವುದಿಲ್ಲ ಎಂಬ ನಂಬಿಕೆಯಿಂದ ಗ್ರಾಮ ಕಲ್ಲಿಗೆ ಪೂಜೆ ಸಲ್ಲಿಸಿದ್ದಾರೆ.