ಮೊದಲು ನಾನು ಕೇಳಿರುವ 4 ಪ್ರಶ್ನೆಗಳಿಗೆ ಉತ್ತರ ಕೊಡಿ. ನಿಮ್ಮ ಉದ್ದರಿ ಉಪದೇಶ ನನಗೆ ಬೇಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು ತಮ್ಮ ಹಾಗೂ ತಮ್ಮ ತಂದೆಯವರ ಬಗ್ಗೆ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಅವರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
“ಸುಳ್ಳುರಾಮಯ್ಯನಿಗೆ ನಾನು ಹೇಳುವುದು ಇಷ್ಟೇ, ನಾನು ಕೇಳಿರುವ 4 ಪ್ರಶ್ನೆಗೆ ಉತ್ತರ ಕೊಡಿ. ಕಾಂಗ್ರೆಸ್ ಪಕ್ಷವನ್ನು ಜನರು ಇಡೀ ದೇಶದಲ್ಲಿ ತಿರಸ್ಕಾರ ಮಾಡಿ ಆಗಿದೆ. ಕರ್ನಾಟಕ ಒಂದರಲ್ಲಿ ಅದು ಏದುಸಿರು ಬಿಡುತ್ತಿದೆ. ಇವರ ಪಕ್ಷದವರೇ ಡಿ.ಜಿ.ಹಳ್ಳಿ ರೀತಿಯಲ್ಲಿ ಹುಬ್ಬಳ್ಳಿಯಲ್ಲಿ ಕೂಡ ಬೆಂಕಿ ಹಚ್ಚಿದರು. ಇವರು ಈ ದೇಶದಲ್ಲಿ ಜಾತ್ಯತೀತತೆ ಉಳಿಸುತ್ತಾರಾ?” ಎಂದು ಪ್ರಶ್ಸಿಸಿದ್ದಾರೆ.
ಆಪರೇಷನ್ ಕಮಲದಿಂದ ಎಷ್ಟು ಹಣ ಪಡೆದಿದ್ದೀರಿ?
ಸುಳ್ಳು ರಾಮಯ್ಯನನ್ನು ಪದೇ ಪದೆ ಕೇಳಿದ್ದೇನೆ. 2009ರಲ್ಲಿ ಆಪರೇಷನ್ ಕಮಲದ ಕಾರಣಕ್ಕೆ ನಡೆದ ಉಪ ಚುನಾವಣೆಯಲ್ಲಿ ಅಂದಿನ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜಕೀಯವಾಗಿ ಮುಗಿಸಲು ಎಷ್ಟು ಹಣ ಸಂದಾಯ ಮಾಡಿಸಿಕೊಂಡಿರಿ. ಕಳೆದ 10 ವರ್ಷದಲ್ಲಿ 50 ಸಲ ಈ ಪ್ರಶ್ನೆ ಕೇಳಿದ್ದೀನಿ. ಇನ್ನೂ ಉತ್ತರ ಕೊಟ್ಟಿಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ :- ಆನೇಕಲ್ ಪಟ್ಟಣದಲ್ಲಿ ಅದ್ದೂರಿಯಾಗಿ ನೆರವೇರಿದ ದ್ರೌಪತಿ ದೇವಿ ಒಣ ಕರಗ
ಸಿದ್ದ ವನದಲ್ಲಿ ಏನು ಮಾಡಿದ್ದೀರಿ?
ಪದೇ ಪದೇ ಬಿಜೆಪಿಯ ಬಿಟೀಂ ಅಂತ ಹೇಳುತ್ತಿದ್ದೀರಿ. ಯಾರಿಂದ ಈ ಸರಕಾರ ನಡೆಯುತ್ತಿರುವುದು ‘ಸಿದ್ದವನ’ದಲ್ಲಿ ಕೂತುಕೊಂಡು ಮಾಡಿದಿರಲ್ಲ ಷಡ್ಯಂತ್ರವನ್ನು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಮೂಲ ಕಾರಣ ಸಿದ್ದರಾಮಯ್ಯ ಎಂದು ನೇರ ಆರೋಪ ಮಾಡಿದರು. ಬಿಜೆಪಿ ಬಗ್ಗೆ ನಾನು ಏಕೆ ಚರ್ಚೆ ಮಾಡಬೇಕು? 150 ಸೀಟ್ ಗೆಲ್ಲುತ್ತೇವೆ ಎಂದು ಭಾಷಣ ಮಾಡಿಕೊಂಡು ಹೋಗುತ್ತಿದ್ದೀರಿ. ಯಾಕೆ, ನಂಬಿಕೆ ಇಲ್ಲವೇ? ಅದಕ್ಕೆ ಈ ನಾಟಕ. ಇವರ ಯೋಗ್ಯತೆ 50-60 ಸೀಟು ಮಾತ್ರ. ಅಲ್ಲಿಗೆ ಬಂದು ನಿಲ್ಲುತ್ತಾರೆ ಇವರು, ಅಷ್ಟೇ. ಮುಂದಿನ ಚುನಾವಣೆಯಲ್ಲಿ ಜನ ಇವರನ್ನು ತಿರಸ್ಕಾರ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬರುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಕುಮಾರಸ್ವಾಮಿ, ಜೆಡಿಎಸ್ ಪಕ್ಷ ನಮಗೆ ಬೆಂಬಲ ಕೊಡಬೇಕು ಅಂತ ನೀವು ಕೇಳ್ತಿದಿರ ಅಲ್ಲವೇ? ನೀವು 150 ಸ್ಥಾನ ಗೆಲ್ಲುವುದಾದರೆ ನನ್ನ ಬೆಂಬಲನೆ ಯಾರಿಗೂ ಬೇಕಾಗಿಲ್ವಲ್ಲಾ. ಬಿಜೆಪಿ-ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳು 150 ಸೀಟ್ ಗೆಲ್ತಿವಿ ಅಂತಾರೆ. ಹೀಗಿದ್ದ ಮೇಲೆ ನನ್ನ ಬೆಂಬಲ ಯಾರಿಗೂ ಬೇಕಿಲ್ಲವಲ್ಲ. ನಾನು ಯಾರಿಗೆ ಬೆಂಬಲ ಕೊಟ್ಟರೆ ಇವರಿಗೆ ಏನು ಆಗಬೇಕು? ಎಂದು ಕೆಂಡಾಮಂಡಲರಾದರು.
ಯಾರ ಜತೆಯೂ ಮೈತ್ರಿ ಇಲ್ಲ
ನಾನು ಯಾರ ಜೊತೆ ಆಗಲಿ ಅಥವಾ ಯಾವ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ನಾವು ಮಿಷನ್ 123 ಇಟ್ಟುಕೊಂಡು ಕಳೆದ ಹತ್ತು ತಿಂಗಳಿನಿಂದ ಕೆಲಸ ಮಾಡುತ್ತಿದ್ದೇವೆ. ಅಭಿವೃದ್ಧಿಪರ ವಿಷಯಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗುತ್ತಿದ್ದೇವೆ.
ಉಂಡ ಮನೆಗೆ ಎರಡು ಬಗೆದವರು
ಉಂಡ ಮನೆಗೆ ದೋಖಾ ಮಾಡಿ ಹೋದಂತಹ ವ್ಯಕ್ತಿ ನನ್ನ ಬಗ್ಗೆ ಚರ್ಚೆ ಮಾಡ್ತಾರ? ಈ ಪಕ್ಷದಿಂದ ಬೆಳೆದು, ಪಕ್ಷಕ್ಕೆ ಚಾಕು ಹಾಕಿ ಹೋದಂತಹ ವ್ಯಕ್ತಿ ಅವರು. ದಿನ ಬೆಳಗ್ಗೆ ಎಂದು ಜನತಾದಳವನ್ನು ಮುಗಿಸಬೇಕು ಎನ್ನುತ್ತಾರೆ. ಈಗ ಕಾಂಗ್ರೆಸ್ ಪಕ್ಷವನ್ನು ಮುಗಿಸ್ತಿನಿ ಎಂತಾ ಹೇಳುತ್ತಿದ್ದಾರೆ. ಕಾಂಗ್ರೆಸ್ ಸಭೆಯೊಳಗೆ ಮಾತನಾಡಿದ್ದರಲ್ಲ, ಅವರ ಹೃದಯದಲ್ಲಿ ಇರುವುದನ್ನೇ ಹೇಳಿದ್ದಾರೆ. ನಂಜು ಇರುವುದು ಯಾರಿಗೆ ಎಂದು ಕುಮಾರಸ್ವಾಮಿ ಕೇಳಿದರು.ಇದನ್ನೂ ಓದಿ :- ಬಿಜೆಪಿ ಯಾವ ಮುಖ ಇಟ್ಕೊಂಡು ಸರ್ಕಾರ ನಡೆಸುತ್ತಿದೆ – ವಿ.ಎಸ್ ಉಗ್ರಪ್ಪ
ಆರೂವರೆ ಕೋಟಿ ಜನತೆಯ ಮೆಚ್ಚಿಸಲು ಈ ರಾಜಕೀಯದಲ್ಲಿ ಇದ್ದೇನೆ
ನಮ್ಮ ಅಪ್ಪನ ಹೆಸರು, ನಮ್ಮ ಪಕ್ಷದ ಹೆಸರು ಹೇಳಿಕೊಂಡು ಎಷ್ಟು ದಿನ ರಾಜಕೀಯ ಹೊಟ್ಟೆಪಾಡು ಮಾಡಬೇಕು ಅಂದುಕೊಂಡಿದ್ದೀರಿ? ಬೇರೆ ಕೆಲಸ ಇಲ್ವಾ ಮಾತನಾಡಲು ನಿಮಗೆ? ಬೆಳಗ್ಗೆ ಎದ್ದರೆ ಜೆಡಿಎಸ್, ಬಿಜೆಪಿ ಬಿಟೀಂ ಅನ್ನುವುದು ಚಾಳಿ ಆಗಿಬಿಟ್ಟಿದೆ ಎಂದು ಹೇಳಿದರು.
ಹಿಜಾಬ್ ವಿಷಯ ಬಂದಾಗ ಕೋಮಾದಲ್ಲಿದ್ದಿರಿ
ಹಿಜಾಬ್ ವಿಷಯ ಬಂದಾಗ ಕೋಮಾದಲ್ಲಿ ಹೋಗಿ ಕೂತಿದ್ದಿರಿ. ನಿಮ್ಮ ಹಿಡನ್ ಅಜೆಂಡಾ ಗೊತ್ತಿದೆ ನನಗೆ. ಸಾಫ್ಟ್ ಹಿಂದುತ್ವ ನಿಮ್ಮದು. ಹಿಜಾಬ್ ಬಗ್ಗೆ ಯಾಕೆ ಮಾತನಾಡಲು ನಿಮಗೆ ಧೈರ್ಯವೇ ಇರಲಿಲ್ಲ. ನೀವು ಬೆಳೆದದ್ದು ಜೆಡಿಎಸ್ ನಿಂದ. ಲಕ್ಷಾಂತರ ಕಾರ್ಯಕರ್ತರ ದುಡಿಮೆ ಮೇಲೆ ಬೆಳೆದಿರಿ. ಈಗ ನಮ್ಮ ಪಕ್ಷವನ್ನೇ ಮುಗಿಸುತ್ತೇನೆ ಎಂದು ಹೊರಟ್ಟಿದ್ದಿರಲ್ಲಾ, ಅದು ನಿಮ್ಮಲ್ಲಿರುವ ನಂಜು. ಮೊದಲು ಅದನ್ನು ಸರಿ ಮಾಡಿಕೊಳ್ಳಿ ಎಂದು ಕುಮಾರಸ್ವಾಮಿ ಅವರು ಛೇಡಿಸಿದರು.
ಇದನ್ನೂ ಓದಿ :- ಪಿಎಸ್ಐ ನೇಮಕಾತಿ ಅಕ್ರಮ – ಪ್ರಭಾವಿ ಸಚಿವರ ಆಶ್ರಯದಲ್ಲಿದ್ದಾರಾ ದಿವ್ಯಾ ಹಾಗರಗಿ ?