ರಾಜ್ಯದಲ್ಲಿ ನಾಳೆಯಿಂದ ಸಾರಿಗೆ ನೌಕರರು ಪ್ರತಿಭಟನೆಗಿಳಿದರೆ ಎಸ್ಮಾ ಜಾರಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಸಾರಿಗೆ ಇಲಾಖೆ ಕಾರ್ಯದರ್ಶಿ ರವಿಕುಮಾರ್ ಎಚ್ಚರಿಸಿದ್ದಾರೆ.
6ನೇ ವೇತನ ಆಯೋಗಕ್ಕೆ ಪಟ್ಟು ಹಿಡಿದು ನಾಳೆಯಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವ ಸಾರಿಗೆ ನೌಕರರ ಬೇಡಿಕೆಗೆ ಬೆಂಗಳೂರಿನಲ್ಲಿ ಬುಧವಾರ ಪ್ರತಿಕ್ರಿಯಿಸಿದ ಅವರು, ಸಾರಿಗೆ ನೌಕರರ ಯಾವುದೇ ಎಚ್ಚರಿಕೆಯನ್ನು ನಾವು ಪರಿಗಣಿಸುವುದಿಲ್ಲ. ವೇತನ ಆಯೋಗ ಜಾರಿ ಪ್ರಶ್ನೆಯೇ ಇಲ್ಲ. ಶೇ.8ರಷ್ಟು ವೇತನ ಹೆಚ್ಚಳಕ್ಕೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದರು.
ಪ್ರತಿಭಟನೆ ನಡೆಸುವ ನೌಕರರ ಜೊತೆ ಸಂಧಾನ ಮಾಡುವ ಪ್ರಶ್ನೆಯೇ ಇಲ್ಲ. ಇಲಾಖೆಗೆ ಪ್ರತಿನಿತ್ಯ 4 ಕೋಟಿ ನಷ್ಟ ಆಗುತ್ತಿದೆ. ಆಗಿದ್ದರೂ ಸಂಬಂಳ ನೀಡಿದ್ದೇವೆ ಎಂದು ಅವರು ಹೇಳಿದರು.
ಕೋವಿಡ್ ನಿಯಮ ಇರುವುದರಿಂದ ನೌಕರರು ಗುಂಪು ಗುಂಪಾಗಿ ಸೇರುವಂತಿಲ್ಲ. ಕೋವಿಡ್ ನಿಯಮ ಉಲ್ಲಂಘಿಸುವಂತಿಲ್ಲ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವಂತಿಲ್ಲ. ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಗೆ ದರ ನಿಗದಿ ಮಾಡುತ್ತೇವೆ. ಆ ದರದಂತೆ ಹಣ ವಸೂಲಿ ಮಾಡಬೇಕು. ರಜೆ, ಹಬ್ಬ ಇರುವುದರಿಂದ ವಿಶೇಷ ರೈಲು ಬಿಡೋಕೆ ರೈಲ್ವೇ ಇಲಾಖೆ ಜೊತೆ ಮಾತನಾಡ್ತೇನೆ ಎಂದು ಅವರು ಹೇಳಿದರು.