ರಾಜ್ಯದ ಕೆಲವೆಡೆ ಎಸಿಬಿ ದಾಳಿ ನಡೆದಿದೆ. ದಾಳಿ ವೇಳೆ ಒಬ್ಬರಿಗಿಂತ ಮತ್ತೂಬ್ಬರು ಭ್ರಷ್ಟರು ಪತ್ತೆಯಾಗಿದ್ದಾರೆ. ಇವರ ಆಸ್ತಿ ನೋಡಿದ್ರೆ ಕುಬೇರನೆ ಶಾಕ್ ಆಗುತ್ತಾನೆ. ಯಾವ ಅರಮನೆಗೂ ಕಮ್ಮಿ ಇಲ್ಲ ಇವರ ಮನೆಗಳು. ಐಷಾರಾಮಿ ಜೀವನ ನೋಡಿ ಎಸಿಬಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಬಿಡಿಎ ಅಧಿಕಾರಿಗಳ ಜತೆ ಸೇರಿಕೊಂಡು ಭ್ರಷ್ಟಾಚಾರ, ಅವ್ಯವಹಾರದಲ್ಲಿ ತೊಡಗಿದ ಆರೋಪ ಕೇಳಿಬಂದ ಹಿನ್ನೆಲೆ ಬೆಂಗಳೂರಿನಲ್ಲಿ ಏಕಕಾಲದಲ್ಲಿ ಎಸಿಬಿ SP ಉಮಾ ಪ್ರಶಾಂತ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳಿಂದ, 9 ಕಡೆ ದಾಳಿ ಮಾಡಲಾಗಿದೆ. ಬೆಂಗಳೂರಿನ ಆರ್.ಆರ್.ನಗರದಲ್ಲಿರುವ ಬಿಡಿಎ ಮಧ್ಯವರ್ತಿ ತೇಜಸ್ವಿ ಮನೆ ಮೇಲೆ ಎಸಿಬಿ ದಾಳಿ ಮಾಡಿದ್ದು, ಕಂತೆ ಕಂತೆ ಹಣ ಪತ್ತೆಯಾಗಿದೆ. ಬೆಳ್ಳಿ ವಸ್ತುಗಳು, ಚಿನ್ನಾಭರಣ, ಬೆಳ್ಳಿ ಪಾತ್ರೆ, ನೂರು, ಐನೂರು ನೋಟ್ ಸಿಕ್ಕಿವೆ. ಮುದ್ದಿನಪಾಳ್ಯದಲ್ಲಿರುವ ಬ್ರೋಕರ್ ಅಶ್ವತ್ಥ್ ಮನೆಯಲ್ಲಿ ಐಷಾರಾಮಿ ಕಾರುಗಳು ಪತ್ತೆಯಾಗಿವೆ. ಇನ್ನೋವಾ, ಆಡಿ, ಬೆಂಜ್, ಲಕ್ಷ, ಕೋಟ್ಯಾಂತರ ಮೌಲ್ಯದ ಲಕ್ಸೂರಿ ಕಾರುಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.
ಆರ್.ಟಿ. ನಗರದಲ್ಲಿರುವ ಮೋಹನ್ ಮನೆಯಲ್ಲಿ ಬರೋಬ್ಬರಿ ಎರಡೂವರೆ ಕೋಟಿ ಮೌಲ್ಯದ 4.5 ಕೆಜಿ ಚಿನ್ನ ಪತ್ತೆಯಾಗಿದೆ. ಕಂತೆ ಕಂತೆ ಹಣ ಪತ್ತೆಯಾಗಿದ್ದು, ಅಪಾರ ಪ್ರಮಾಣದ ಬೆಳ್ಳಿ ತಟ್ಟೆ, ಲೋಟ, ಬಟ್ಟಲು, ದೀಪ, ಚಿನ್ನದ ಸರ, ಚಿನ್ನದ ಓಲೆ, ಚಿನ್ನಡ ಡಾಬು ಸಿಕ್ಕಿದೆ. ಮಧ್ಯವರ್ತಿ ಮೋಹನ್ಗೆ ಸೇರಿದ ಲ್ಯಾಪ್ಟಾಪ್, ಒಂದು ಬ್ಯಾಗ್ನಷ್ಟು ದಾಖಲೆಯನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದೊಮ್ಮಲೂರಿನ ಬ್ರೋಕರ್ ಮನೋಜ್ ಮನೆಯಲ್ಲಿ ಬೆಲೆ ಬಾಳುವ ವಸ್ತುಗಳು ಪತ್ತೆಯಾಗಿವೆ. ದೇಶ ಹಾಗೂ ವಿದೇಶಗಳ ಪ್ರತಿಷ್ಟಿತ ಬ್ರಾಂಡ್ನ 19 ಸನ್ ಗ್ಲಾಸಸ್ ಹಾಗೂ 22 ಗಡಿಯಾರಗಳು ಪತ್ತೆಯಾಗಿದ್ದು, ಅಧಿಕಾರಿಗಳು ಇನ್ನೂ ಮನೆಯನ್ನು ಜಾಲಾಡುತ್ತಿದ್ದಾರೆ. ಇನ್ನೂ ಬ್ರೋಕರ್ ರಾಮ-ಲಕ್ಷ್ಮಣ ಮನೆ ಮೇಲೆ ಎಸಿಬಿ ದಾಳಿ ಮಾಡಿದ್ದು, ಮನೆ ಬಿಗ ತೆಗೆಸಿ ಶೋಧ ಮಾಡಲಾಗುತ್ತಿದೆ. 12 ಎಸಿಬಿ ಅಧಿಕಾರಿಗಳ ತಂಡದಿಂದ ದಾಖಲೆ ಪರಿಶೀಲನೆ ಮಾಡಲಾಗುತ್ತಿದೆ.
ಬಿಡಿಎ ಮಧ್ಯವರ್ತಿ ಮುನಿರತ್ನ ಮನೆಯಲ್ಲಿ ಎಸಿಬಿ ತಲಾಶ್ ನಡೆದಿದ್ದು, ಮುನಿರತ್ನ ಮನೆಗೆ ಪ್ರಿಂಟರ್ ಜತೆ ಅಧಿಕಾರಿಗಳು ಆಗಮಿಸಿದ್ದಾರೆ. ಈ ವೇಳೆ ಅಪಾರ ಪ್ರಮಾಣದ ದಾಖಲೆ ಪತ್ತೆಯಾಗಿದೆ. ಬಿಡಿಎ ಮಧ್ಯವರ್ತಿ ಚಿಕ್ಕಹನುಮಯ್ಯನ ಎರಡು ಅಂತಸ್ತಿನ ಮನೆ ಮೇಲೆ ಕೂಡ ದಾಳಿಯಾಗಿದ್ದು, ಮನೆ ಮುಂದೆ ನಿಲ್ಲಿಸಿರುವ ಕಾರುಗಳ ಪರಿಶೀಲನೆ ಮಾಡಲಾಗಿದೆ.