ಕಲಬುರ್ಗಿ: ನಮ್ಮಲ್ಲಿ ಕೆಲ ವ್ಯತ್ಯಾಸಗಳಾಗಿದ್ದು, ಅವುಗಳನ್ನು ಸರಿಪಡಿಸುವ ವ್ಯವಸ್ಥೆಯಿದೆ. ಆದರೆ, ಕಾಂಗ್ರೆಸ್ ನಲ್ಲಿ ಸರಿಪಡಿಸುವ ವ್ಯವಸ್ಥೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಸಚಿವ ಕೆ. ಎಸ್. ಈಶ್ವರಪ್ಪ ದೂರು ವಿಚಾರವಾಗಿ ಕೆಲ ವ್ಯತ್ಯಾಸಗಳಾಗಿರುವುದು ನಿಜ. ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುತ್ತೇವೆ. ಮೂರೂ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ. ಸಚಿವ ಈಶ್ವರಪ್ಪ ಹಾಗೂ ಯತ್ನಾಳ್ ಅವರ ಹೇಳಿಕೆಗಳು ಉಪ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.
ನಮ್ಮಲ್ಲಿ ಅಭಿಪ್ರಾಯಗಳಿವೇ ಹೊರತು ಭಿನ್ನಾಭಿಪ್ರಾಯಗಳಿಲ್ಲ. ಇದಕ್ಕೂ ಉಪಚುನಾವಣೆಗೂ ಸಂಬಂಧವೇ ಇಲ್ಲ. ಇವತ್ತಿಗೂ ಬಿಜೆಪಿ ಶಿಸ್ತಿನ ಪಕ್ಷ ನಮ್ಮಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಹಳ ಚೆನ್ನಾಗಿದೆ. ವ್ಯತ್ಯಾಸಗಳಿರುವುದನ್ನು ಸರಿಪಡಿಸಲು ನಮ್ಮಲ್ಲಿ ವ್ಯವಸ್ಥೆ ಇದೆ ಹಾಗಾಗಿ ಎಲ್ಲವೂ ಸರಿಯಾಗುತ್ತೆ ಎಂದು ಹೇಳಿದರು.
ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಮಾತೇ ಇಲ್ಲ ತನಿಖೆಯ ದಾರಿ ತಪ್ಪಿಸಲು ಅವಕಾಶ ಕೊಡಲಾಗದು. ಎಸ್ಐಟಿ ಮೇಲೆ ನಮಗೆ ಸಂಪೂರ್ಣ ನಂಬಿಕೆ, ವಿಶ್ವಾಸ ಇದೆ ಕಾನೂನು ಪ್ರಕಾರ ಎಲ್ಲ ಕ್ರಮಗಳೂ ಆಗುತ್ತೆ ಎಲ್ಲರಿಗೂ ನ್ಯಾಯ ಸಿಗುತ್ತೆ ಎಂದರು.