ಮೆಟ್ರೋ ಕಾಮಗಾರಿ ವೇಳೆ ಬಹುಮಹಡಿ ಕಟ್ಟಡವೊಂದು ಕುಸಿದು ಬಿದ್ದಿದ್ದು, ಸ್ವಲ್ಪದರಲ್ಲೇ ದುರಂತವನ್ನು ತಪ್ಪಿದ ಘಟನೆ ಬೆಂಗಳೂರಿನ ಲಕ್ಕಸಂದ್ರದಲ್ಲಿ ಸಂಭವಿಸಿದೆ.
ವಿಲ್ಸನ್ ಗಾರ್ಡನ್ ನ ಲಕ್ಕಸಂದ್ರದಲ್ಲಿ ಇರುವ ಈ ಕಟ್ಟಡದಲ್ಲಿ ಕೂಲಿ ಕಾರ್ಮಿಕರನ್ನು ತಂಗಲು ಬಳಸಲಾಗುತ್ತಿತ್ತು. ಕಟ್ಟಡ 2 ವರ್ಷಗಳ ಹಿಂದೆಯೇ ವಾಲಿದ್ದರೂ ದುರಸ್ತಿ ಮಾಡಿಸದೇ ಜನರು ವಾಸಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸೋಮವಾರ ಬೆಳಿಗ್ಗೆ ಮನೆ ನಿಧಾನವಾಗಿ ವಾಲಲು ಶುರುವಾಗಿದ್ದು, ಅಪಾಯದ ಮುನ್ಸೂಚನೆ ದೊರೆತ ಜನರು ಮನೆಯಿಂದ ಹೊರಗೆ ಬಂದು ಬಚಾವಾಗಿದ್ದಾರೆ.
ಮನೆಯಿಂದ ಹೊರಗೆ ಬಂದ ನಿವಾಸಿಗಳು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬರುವ ಒಳಗೆ ಮನೆ ಕುಸಿದುಬಿದ್ದಿದೆ.
ಮನೆಯಲ್ಲಿ ಸುಮಾರು 50 ಜನ ಕೂಲಿ ಕಾರ್ಮಿಕರು ವಾಸವಾಗಿದ್ದರು. 1974 ರಲ್ಲಿ ನಿರ್ಮಾಣಗೊಂಡಿದ್ದ ಮನೆ ಸುರೇಶ್ ಎಂಬುವವರಿಗೆ ಸೇರಿದೆ. ಎರಡು ವರ್ಷದ ಹಿಂದೆ ಸುರೇಶ್ ಗೆ ಮನೆ ತೆರವುಗೊಳಿಸುವಂತೆ ನೊಟೀಸ್ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.