ಹಾವೇರಿ : ಇನ್ನು ಮುಂದೆ ಹೊರ ರಾಜ್ಯಗಳಿಂದ ಕರ್ನಾಟಕ ಪ್ರವೇಶ ಮಾಡಬೇಕೆಂದರೆ ಕೋವಿಡ್ ಟೆಸ್ಟ್ ನೆಗೆಟಿವ್ ಇರುವುದು ಕಡ್ಡಾಯ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಈ ನಿಯಮವನ್ನು ಪರಿಪಾಲನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಲಾಕ್ಡೌನ್ ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಲವಾರು ನಿರ್ಬಂಧ ಹಾಕಲಾಗಿದೆ. ಎಲ್ಲ ಕಡೆ ಪೊಲೀಸ್ ನಾಕಾಬಂದಿ ಹಾಕಲಾಗಿದೆ. ವಿಶೇಷವಾಗಿ ಗಡಿ ಪ್ರದೇಶದಲ್ಲಿ ಮತ್ತಷ್ಟು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಗಡಿಜಿಲ್ಲೆಗಳ ಮೂಲಕ ಹೊರರಾಜ್ಯದವರು ಕರ್ನಾಟಕವನ್ನು ಪ್ರವೇಶ ಬೇಕೆಂದರೆ ಅವರು ಕೋವಿಡ್ ನೆಗೆಟಿವ್ ಟೆಸ್ಟ್ ರಿಪೋರ್ಟ್ ಇಟ್ಟುಕೊಂಡಿರುವುದು ಕಡ್ಡಾಯ. ಇಲ್ಲದಿದ್ದರೆ ಯಾರನ್ನೂ ಕರ್ನಾಟಕದ ಒಳಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಈ ಸಂಬಂಧ ಗಡಿ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಕಲಬುರ್ಗಿ, ಮಂಗಳೂರು, ಉಡುಪಿ ಗಡಿ ಜಿಲ್ಲೆಗಳಲ್ಲಿ ಹಾಗೂ ಆನೆಕಲ್ನಲ್ಲಿ ಕಠಿಣ ನಿರ್ಬಂಧ ಹೇರುವಂತೆ ಆದೇಶಿಸಲಾಗಿದೆ ಸಚಿವರು ತಿಳಿಸಿದರು.