ಮಂಗಳೂರು: ಗಡಿ ಭದ್ರತಾ ಪಡೆಯಲ್ಲಿ ಮಹಿಳೆಯರಿಗೆ ಅವಕಾಶ ಸಿಕ್ಕಿದ ನಂತರ ಯುವತಿಯರು ಬಿಎಸ್ ಎಫ್ ಗೆ ಸೇರಲು ಉತ್ಸುಕರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಇಬ್ಬರು ಯುವತಿಯರು ಇದೀಗ ಭಾರತೀಯ ಗಡಿ ಭದ್ರತಾ ಪಡೆಗೆ ಸೇರಿದ್ದಾರೆ. ಪುತ್ತೂರು ತಾಲೂಕಿನ ಬಲ್ನಾಡಿನ ರಮ್ಯಾ ಹಾಗೂ ಕಡಬ ತಾಲೂಕಿನ ಕಾಣಿಯೂರು ನಿವಾಸಿ ಯೋಗಿತ ಎಪ್ರಿಲ್ 1 ರಿಂದ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ರಮ್ಯಾ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಪದ್ಮಯ್ಯ ಗೌಡ ಹಾಗೂ ತೇಜಾವತಿ ದಂಪತಿ ಪುತ್ರಿ. ಈಕೆ ಬಲ್ನಾಡು ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಿಕ್ಷಣ, ಪಿಯುಸಿ ಹಾಗೂ ಪದವಿಯನ್ನು ವಿವೇಕಾನಂದ ಕಾಲೇಜಿನಲ್ಲಿ ಮುಗಿಸಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ ವೈದ್ಯಕೀಯ ಪರೀಕ್ಷೆ ಬರೆದಿದ್ದರು. ಶಾಲಾ ದಿನಗಳಲ್ಲಿಯೇ ಎನ್ ಸಿಸಿಯಲ್ಲಿ ಪಾಲ್ಗೊಂಡು ತರಬೇತಿಯನ್ನು ಪಡೆದಿದ್ದರು.
ಇನ್ನೋರ್ವ ಯುವತಿ ಕಾಣಿಯೂರಿನ ಯೋಗಿತಾ ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಮಲೆಕರ್ಚಿ ಮೇದಪ್ಪ ಗೌಡ ಮತ್ತು ದೇವಕಿಯವರ ಪುತ್ರಿ. ಭಾರತೀಯ ಸೇನೆಗೆ ಈಗೆ ಆಯ್ಕೆಯಾಗಿದ್ದು, ಎಪ್ರಿಲ್ 1 ರಂದು ಮಧ್ಯಪ್ರದೇಶದ ಗ್ವಾಲಿಯರ್ ನ ತೇಕನ್ಪುರ್ ನಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ರಮ್ಯಾ ಬೊಬ್ಬೆಕೇರಿ ಮತ್ತು ಅಲಂಕಾರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಪ್ರೌಢಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಕಾಣಿಯೂರಿನಲ್ಲಿ, ಕೆ.ಎಸ್ ಗೌಡ ಪಿಯು ಕಾಲೇಜು ನಿಂತಿಕಲ್ ಇಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ.70 ಅಂಕಗಳೊಂದಿಗೆ ಪಿಯು ಶಿಕ್ಷಣ ಪಡೆದಿದ್ದಾರೆ. ವಿಶ್ವವಿದ್ಯಾಲಯ ಕಾಲೇಜು ಮಂಗಳೂರಲ್ಲಿ ಬಿಎಸ್ಸಿ ಪದವಿ, ಕೊಣಾಜೆ ಮಂಗಳ ಗಂಗೋತ್ರಿಯಲ್ಲಿ ಮೈಕ್ರೋಬಯಲಾಜಿ ವಿಷಯದಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ.