ಚಾಮರಾಜನಗರ: ಜಿಲ್ಲಾಧಿಕಾರಿ ಅವರ ಜೊತೆ ನಿನ್ನೆ ರಾತ್ರಿ ಮಾತನಾಡಿದ್ದೆ. ಆದರೆ, ಅವರು ನಿನ್ನೆ ಆಕ್ಸಿಜನ್ ಕೊರತೆ ಬಗ್ಗೆ ನನಗೆ ಮಾಹಿತಿ ನೀಡಿಲ್ಲ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಮೈಸೂರು ಸಂಸದರ ಜೊತೆ ಮಾತನಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಕೋವಿಡ್ ಕಾರಣದಿಂದ ಚಾಮರಾಜನಗರ ಹೋಗುತ್ತಿಲ್ಲ. ಆದರೆ ಮಾಹಿತಿ ತರಿಸಿಕೊಳ್ಳುತ್ತಿದ್ದೇನೆ ಎಂದರು.
ಇನ್ನು ಜಿಲ್ಲೆಗೆ ಮೈಸೂರಿನಿಂದ ಆಕ್ಸಿಜನ್ ಪೂರೈಕೆ ಆಗಿಲ್ಲ ಅಂತ ಅಷ್ಟೇ ಸದ್ಯಕ್ಕೆ ಗೊತ್ತಾಗಿದೆ. ಮೊದಲನೇ ಅಲೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರವೇ ಚಾಮರಾಜನಗರ ಕೊರೊನಾ ನಿರ್ವಹಣೆ ಬಗ್ಗೆ ಮೆಚ್ವುಗೆ ವ್ಯಕ್ತಪಡಿಸಿತ್ತು. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರೇ ಜಿಲ್ಲಾಧಿಕಾರಿಗಳ ಜೊತೆ ಪೋನ್ನಲ್ಲಿ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಸದ್ಯ ಈಗ ನಡೆದಿರುವುದು ಘಟನೆ ದುರದೃಷ್ಟಕರ. ಸಾವನಪ್ಪಿದ್ದವರ ಕುಟುಂಬಕ್ಕೆ ಪರಿಹಾರ ನೀಡಬೇಕು. ಹೆಚ್ಚಿನ ಪರಿಹಾರಕ್ಕೆ ನಾನು ಒತ್ತಾಯ ಮಾಡುತ್ತೇನೆ ಎಂದರು.