ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರ ಪುತ್ರ ಚಲಾಯಿಸುತ್ತಿದ್ದರು ಎನ್ನಲಾದ ಕಾರು ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ರೈತ ಮೃತಪಟ್ಟಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಲಕ್ಷ್ಮಣ್ ಸವದಿ ಪುತ್ರ ಚಿದಾನಂದ ಸವದಿ ಅವರಿಗೆ ಕ್ಲೀನ್ ಚಿಟ್ ನೀಡಿರುವ ಪೊಲೀಸರು ಚಾಲಕ ಹನುಮಂತ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ್ ತಾಲ್ಲೂಕಿನ ಕೂಡಲಸಂಗಮ ಕ್ರಾಸ್ ಬಳಿ ಸೋಮವಾರ ತಡರಾತ್ರಿ ಸವದಿ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಕೂಡಲೆಪ್ಪ ಬೋಳಿ(58) ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಅವರೇ ಕಾರು ಚಲಾಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಸ್ಥಳೀಯರು ವಿಡಿಯೋ ಮಾಡಲು ಮುಂದಾದವರ ಮೇಲೆ ಧಮ್ಕಿ ಹಾಕಿದ ಚಿದಾನಂದ್ ಸವದಿ, ಚಿತ್ರಿಕರಣದ ಮೊಬೈಲ್ ಕಿತ್ತುಕೊಂಡು ಡಿಲಿಟ್ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಾರ್ ನಂಬರ್ ಪ್ಲೇಟ್ ಕಿತ್ತಾಕಿ ಸ್ಥಳದಿಂದ ಬೇರೆ ಕಾರಿನಲ್ಲಿ ಚಿದಾನಂದ್ ಸವದಿ ಪರಾರಿಯಾಗಲು ಯತ್ನಿಸಿದ್ದು, ಜನರು ಸೇರುತ್ತಿದ್ದಂತೆ ಅಲ್ಲೇ ಇದ್ದು ವೀಡಿಯೋ ಮಾಡದಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಗಾಯಗೊಂಡಿದ್ದ ರೈತನನ್ನು ಉಪಚರಿಸದೇ ಚಿದಾನಂದ್ ಸವದಿ ಮಾನವೀಯತೆ ಕೂಡ ಮರೆತಿದ್ದಾರೆ ಎಂದು ಡಿಸಿಎಂ ಸವದಿ ಪುತ್ರನ ನಡೆಗೆ ಚಿಕ್ಕ ಹಂಡ್ರಗಲ್ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತ ಕೂಡಲೆಪ್ಪ ಬಾಗಲಕೋಟೆ ತಾಲ್ಲೂಕಿನ ಚಿಕ್ಕಹಂಡರಗಲ್ ಗ್ರಾಮದ ನಿವಾಸಿಯಾಗಿದ್ದು, ಹೊಲಕ್ಕೆ ಹೋಗಿ ವಾಪಸ್ ಮನೆಗೆ ಬರುವಾಗ ವಿಜಯಪುರ ಮಾರ್ಗವಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ನಂತರ ಬೈಕ್ ಸವಾರನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸುವ ಬದಲು ತಮ್ಮ ವಾಹನದ ನಂಬರ್ ಜಖಂಗೊಳಿಸಿ ದಾಖಲಾತಿ ಸಮೇತ ಇನ್ನೊಂದು ವಾಹನದಲ್ಲಿ ಹೊರಡಲು ಸವದಿ ಪುತ್ರ ಮುಂದಾಗಿದ್ದರು ಎನ್ನಲಾಗಿದೆ.
ವಾಹನ ಯಾರದ್ದು ಎಂದು ತಿಳಿಯದಂತೆ ನೋಡಿಕೊಳ್ಳಲು ಪ್ರಯತ್ನಿಸಲಾಗಿದ್ದು, ಚಿದಾನಂದ ಸವದಿಯನ್ನು ಕೆಲ ಸಮಯ ಸ್ಥಳೀಯರು ಹಿಡಿದು ಕೂರಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಅವರನ್ನು ಬಿಡಿಸಿದ್ದಾರೆ. ಡಿಕ್ಕಿ ಹೊಡೆದ ವಾಹನ ಚಿದಾನಂದ ಸವದಿ ಅವರದ್ದೇ ಎಂದು ದೃಢಪಟ್ಟಿದ್ದು, ಚಿದಾನಂದ ಮತ್ತೊಂದು ಕಾರಿನಲ್ಲಿ ಬರುತ್ತಿದ್ದರು. ಡಿಕ್ಕಿ ಹೊಡೆದ ಕಾರಿನಲ್ಲೇ ಚಾಲಕ ಹನುಮಂತ ಸೇರಿದಂತೆ ನಾಲ್ವರು ಇದ್ದರು ಎಂದು ಪೊಲೀಸರು ಹೇಳಿದ್ದಾರೆ.