ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಚಿವ ಈಶ್ವರಪ್ಪ ಪರಸ್ಪರ ಏಕವಚನದಲ್ಲಿ ಆರೋಪ-ಪ್ರತ್ಯಾರೋಪಕ್ಕೆ ಇಳಿದ ಘಟನೆ ನಡೆಯಿತು.
ರಾಷ್ಟ್ರಧ್ವಜ ಹೇಳಿಕೆ ಕುರಿತು ಪ್ರಸ್ತಾಪಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಈಶ್ವರಪ್ಪ ರಾಷ್ಟ್ರಧ್ವಜದ ಬಗ್ಗೆ ಅಗೌರವದಿಂದ ಮಾತನಾಡಿದ್ದಾರೆ. ಆರ್ಟಿಕಲ್ 51 ಮತ್ತು 1ರ ಅನ್ವಯ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕಿತ್ತು. ಅಲ್ಲದೇ ಸ್ವತಃ ಮುಖ್ಯಮಂತ್ರಿಗಳೇ ರಾಜೀನಾಮೆ ಪಡೆಯಬೇಕಿತ್ತು ಎಂದು ಆಗ್ರಹಿಸಿದರು.
ರಾಷ್ಟ್ರಧ್ವಜ ನೋಡಿದಾಗ ನಮಗೆ ಗೌರವ, ರೋಮಾಂಚನ ಆಗುತ್ತದೆ. ದೇಶದ ಪ್ರತಿಯೊಬ್ಬರೂ ರಾಷ್ಟ್ರಧ್ವಜಕ್ಕೆ ಗೌರವ ಕೊಡಬೇಕು. ಆದರೆ ಸಚಿವರಾಗಿದ್ದರೇ ಈ ರೀತಿ ಹೇಳಿಕೆ ನೀಡಿರುವುದು ಭಾರತ ಸಂಹಿತೆ ಪ್ರಕಾರ ದೇಶದ್ರೋಹ ಆಗಿದೆ ಎಂದರು.
ಈ ವೇಳೆ ಸಿಟಿ ರವಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದೀರಿ ಎಂದು ಆರೋಪಿಸಿದಾಗ ಮಧ್ಯಪ್ರವೇಶಿಸಿದ ಕೃಷ್ಣ ಭೈರೇಗೌಡ, ಬೆಂಕಿ ಹಚ್ಚುತ್ತಿರುವುದು ನೀವು ಸ್ವಾಮಿ. ನಾವಲ್ಲ ಎಂದು ತಿರುಗೇಟು ನೀಡಿದರು.
ಈ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಈಶ್ವರಪ್ಪ ಅವರಿಂದ ಪ್ರತಿಕ್ರಿಯೆ ಕೇಳುವುದಾಗಿ ಹೇಳಿದಾಗ, ದೇಶದ್ರೋಹಿ ಹತ್ತಿರ ಏನು ಹೇಳಿಕೆ ಕೊಡಿಸುತ್ತೀರ? ಎಂದು ಡಿಕೆ ಶಿವಕುಮಾರ್ ಹೇಳಿದಾಗ ಆಕ್ರೋಶಗೊಂಡ ಈಶ್ವರಪ್ಪ, ಜೈಲಿಗೆ ಹೋಗಿ ಬೇಲ್ ಮೇಲೆ ಹೊರಗೆ ಬಂದವನು ನೀನು ದೇಶದ್ರೋಹಿ ಎಂದರು.
ಇದರಿಂದ ಕೆರಳಿದ ದೇಶದ ಆಸ್ತಿಯನ್ನು ನಿಮ್ಮಪ್ಪ ಖರೀದಿಸಿದ್ದನಾ? ಇದು ನಿಮ್ಮಪ್ಪನ ಆಸ್ತಿನಾ ಎಂದು ಈಶ್ವರಪ್ಪ ತಿರುಗೇಟು ನೀಡಿದರು. ಈ ವೇಳೆ ಇಬ್ಬರೂ ಏಕವಚನದಲ್ಲಿ ಪರಸ್ಪರ ನಿಂದಿಸಿಕಂಡರು. ಸಭೆಯಲ್ಲಿ ಕೋಲಾಹಲ ಆಗುತ್ತಿದ್ದಂತೆ ಸ್ಪೀಕರ್ ಕಲಾಪವನ್ನು ಒಂದು ಗಂಟೆ ಮುಂದೂಡಿದರು.