ಕೈರೋ: ಎವರ್ಗಿವನ್ ಹಡಗು ಸೂಯೆಜ್ ಕಾಲುವೆಯಲ್ಲಿ ಸಿಕ್ಕಿ ಹಾಕಿಕೊಂಡು ಜಾಗತಿಕ ವ್ಯಾಪಾರಕ್ಕೆ ಭಾರೀ ನಷ್ಟವನ್ನುಂಟುಮಾಡಿತ್ತು. ಎವರ್ ಗಿವನ್ ಹಡಗು ರಹದಾರಿಯಲ್ಲಿ ಸಿಲುಕಿದ್ದರಿಂದ ಸುಯೆಜ್ ಕಾಲುವೆಗೆ ದಿನವೊಂದಕ್ಕೆ 12ರಿಂದ 15 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟವಾಗಿತ್ತು.
ಈ ಕಾರಣಕ್ಕೆ ತನಗಾಗಿರುವ ನಷ್ಟವನ್ನು ಬರ್ತಿ ಮಾಡಿಕೊಡುವಂತೆ ಎಂವಿ ಎವರ್ ಗಿವನ್ ಮಾಲೀಕನನ್ನು ಒತ್ತಾಯಿಸಿರುವ ಈಜಿಪ್ಟ್, ಬರೋಬ್ಬರಿ ಒಂದು ಬಿಲಿಯನ್ ಅಮೆರಿಕನ್ ಡಾಲರ್ ಪರಿಹಾರ ಕೇಳಿದೆ. ನ್ಯಾಯಾಲಯ ನೀಡಿರುವ ಆದೇಶದ ಮೇರೆಗೆ ವ್ಯಾಪಾರಕ್ಕೆ ಉಂಟಾದ ನಷ್ಟವನ್ನು ಭರಿಸುವವರೆಗೆ ಹಡಗನ್ನು ಬಿಡುಗಡೆ ಮಾಡುವುದಿಲ್ಲ ಎಂದು ಈಜಿಪ್ಟ್ ಸರ್ಕಾರ ಸ್ಪಷ್ಟಪಡಿಸಿದೆ.
ಹಡಗನ್ನು ಮೇಲೆತ್ತಲು ತಗುಲಿದ ನಿರ್ವಹಣಾ ವೆಚ್ಚ, ಸುಮಾರು ಆರು ದಿನಗಳವರೆಗೆ ಯಾವುದೇ ವಾಣಿಜ್ಯ ಚಟುವಟಿಕೆಗಳು ನಡೆಯದ ಕಾರಣ ಕಾಲುವೆ ಪ್ರಾಧಿಕಾರಕ್ಕೆ ಉಂಟಾದ ನಷ್ಟವನ್ನು ಲೆಕ್ಕ ಮಾಡಿ ಎವರ್ ಗಿವನ್ ಹಡಗಿನ ಮಾಲೀಕನಿಂದ ಒಂದು ಬಿಲಿಯನ್ ಅಮೆರಿಕನ್ ಡಾಲರ್ ಪರಿಹಾರ ಕೇಳಲಾಗಿದೆ.
ಸುಮಾರು 120ಕ್ಕೂ ಹೆಚ್ಚು ಹಡಗುಗಳು ಒಂದು ವಾರಗಳ ಕಾಲ ಸುಯೆಜ್ ಕಾಲುವೆಯಲ್ಲೇ ನಿಂತಿದ್ದರಿಂದ ಜಾಗತಿಕ ಜಲಮಾರ್ಗ ವ್ಯಾಪಾರದ ಮೇಲೆ ಭಾರೀ ವ್ಯತಿರಿಕ್ತ ಪರಿಣಾಮ ಬೀರಿತ್ತು.