ಧಾರವಾಡ ಜೈಲಿನಲ್ಲಿ ಪಾಕಿಸ್ತಾನ ಮೂಲದ ಶಂಕಿತ ಭಯೋತ್ಪಾದಕ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಈ ವೇಳೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೈಲಿನಲ್ಲಿರುವ ವ್ಯಕ್ತಿಯನ್ನು ಪಾಕಿಸ್ತಾನ ಮೂಲದ ನಿಷೇಧಿತ ಅಲ್-ಬದ್ರ್ ಉಗ್ರ ಸಂಘಟನೆಯ ಶಂಕಿತ ಉಗ್ರ ಮೊಹಮ್ಮದ್ ಫಹಾದ್ ಎಂದು ಗುರ್ತಿಸಲಾಗಿದೆ. ಈತ ಕೇರಳ ಮೂಲದ ಕೆಲ ವ್ಯಕ್ತಿಗಳ ನೆರವಿನೊಂದಿಗೆ ನಕಲಿ ದಾಖಲೆಗಳೊಂದಿಗೆ ಭಾರತ ಪ್ರವೇಶಿಸಿದ್ದ.
ಮೈಸೂರಿನಲ್ಲಿ ಪಾಕಿಸ್ತಾನ ಮೂಲಕ ಕೆಲ ಉಗ್ರರು ಭಯೋತ್ಪಾದಕ ಚಟುವಟಿಕೆಗಳ ನಡೆಸುತ್ತಿದ್ದಾರೆಂದು ಗುಪ್ತಚರ ದಳದ ಅಧಿಕಾರಿಗಳು ಈ ಹಿಂದೆ ಮಾಹಿತಿ ನೀಡಿದ್ದರು. ಇದರಂತೆ ಪೊಲೀಸರು 2006ರಲ್ಲಿ ಫಹದ್ ನನ್ನು ಬಂಧನಕ್ಕೊಳಪಡಿಸಿದ್ದರು.
ಈತ ಕೆಲವು ಸ್ಫೋಟ ಚಟುವಟಿಕೆಗಳಲ್ಲಿ ಮತ್ತು ಮಡಿವಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಹೀಗಾಗಿ ಈತನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, 2006ರಲ್ಲಿ ಬಂಧನಕ್ಕೊಳಪಡಿಸಲಾಗಿತ್ತು. ನಂತರ ಧಾರವಾಡ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಇದನ್ನೂ ಓದಿ : – ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯೋದಕ್ಕೂ ಶಿಕ್ಷಣ ಇಲಾಖೆಯಲ್ಲಿ ನಡೆಯೋದಕ್ಕು ವ್ಯತ್ಯಾಸ ಇದೆ – ಬಸವರಾಜ್ ರಾಯರೆಡ್ಡಿ
ಇತರೆ ಕೈದಿಗಳೊಂದಿಗೆ ಸದಾಕಾಲ ಜಗಳಕ್ಕಿಳಿಯುತ್ತಿದ್ದ ಹಿನ್ನೆಲೆಯಲ್ಲಿ ಫಹಾದ್ ನನ್ನು ಪ್ರತ್ಯೇಕ ಸೆಲ್ ನಲ್ಲಿ ಇರಿಸಲಾಗಿತ್ತು. ಈ ನಡುವೆ ಆರೋಪಿ ತನ್ನ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸುವಂತೆ ನ್ಯಾಯಾಲಯಕ್ಕೆ ಒತ್ತಾಯಿಸಿ ಅವರು ಮೇ 3 ರಂದು ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದ. ಉಪವಾಸ ಸತ್ಯಾಗ್ರಹ ಸ್ಥಗಿತಗೊಳಿಸುವಂತೆ ಜೈಲು ಅಧಿಕಾರಿಗಳು ಸಾಕಷ್ಟು ಮನವೊಲಿಸಲು ಪ್ರಯತ್ನ ನಡೆಸಿದ್ದರೂ, ಯಾರೊಬ್ಬರ ಮಾತನ್ನೂ ಕೇಳಿರಲಿಲ್ಲ.
ಇದೀಗ ಆರೋಗ್ಯ ಹದಗೆಟ್ಟಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಧಾರವಾಡ ಜೈಲು ಅಧೀಕ್ಷಕ ಎಂ.ಎ.ಮರಿಗೌಡ ಮಾತನಾಡಿ, ಮೇ 5ರಂದು ಸಂಜೆ ಆತನ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಸಕ್ಕರೆ ಪ್ರಮಾಣ ತೀವ್ರವಾಗಿ ಕುಸಿತಗೊಂಡಿತ್ತು. ವೈದ್ಯರ ಸಲಹೆ ಮೇರೆಗೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ : – PSI ಹುದ್ದೆ ಕೊಡಿಸುವುದಾಗಿ ಲಕ್ಷ ಲಕ್ಷ ವಸೂಲಿ ಮಾಡಿ ವಂಚಿಸಿದ ಕಿರಾತಕನ ಬಂಧನ