ರಾಜ್ಯದಲ್ಲಿ ಮುಂಗಾರಿನ ಒಡೆತದಿಂದ ರೈತರಿಗೆ ಸಂಕಷ್ಟ ಶುರುವಾಗಿತ್ತು, ಗ್ರಾಹಕರಿಗೆ ತರಕಾರಿಗಳ ಬೆಲೆ ಏರಿಕೆಯಿಂದ ಕೈ ಸುಡುತ್ತಿತ್ತು ಆದರೀಗ ಅಂತಹದ್ದೇ ಮತ್ತೊಂದು ಸಂಕಷ್ಟ ಮಹಿಳೆಯರಿಗೆ ಮತ್ತು ಹೆಂಡತಿಯನ್ನು ಪ್ರೀತಿಸುವ ಪುರುಷರಿಗೂ ಎದುರಾಗಿದೆ. ಏನಪ್ಪಾ ಅಂದ್ರೆ ಮಲ್ಲಿಗೆ, ಕನಕಾಂಬರ, ಸುಂಗಂಧ, ಚಂಡು ಹೂ, ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ ಪ್ರತಿಯೊಬ್ಬ ಮಹಿಳೆಯರಿಗೂ ಹೂಗಳೆಂದರೆ ಅಚ್ಚು ಮೆಚ್ಚು. ಅಲ್ಲದೇ ಮುನಿಸಿಕೊಂಡ ಹೆಂಡತಿಯನ್ನ ರಮಿಸಲು ಪುರುಷರೂ ಸಹ ಹೂ ತಂದು ಸಮಾಧಾನಿಸುತ್ತಿದ್ದರು ಆದರೀಗ ಹೂಗಳ ಬೆಲೆ ತಾರಕಕ್ಕೇರಿ ಮಹಿಳೆಯರು ಮತ್ತು ಪುರುಷರಿಗೆ ದುಬಾರಿಯ ಮುಳ್ಳುಗಳು ಚುಚ್ಚುತ್ತಿವೆ. ಯಾವ ಹೂ ಯಾವ ಬೆಲೆಯಲ್ಲಿ ಸಿಗುತ್ತಿವೆ ಎಲ್ಲಾ ವಿಷಯ ತಿಳಿದುಕೊಳ್ಳಲೇಬೇಕಾಗಿದೆ.
ಮುಂಗಾರಿನ ಹೊಡೆತದಿಂದ ತರಕಾರಿಗಳ ಜೊತೆ ಹೂಗಳ ಬೆಲೆಯೂ ಸಹ ಏರಿಕೆಯಾಗಿದ್ದು, ಮಾರ್ಕೇಟ್‌ನಲ್ಲಿ ಹೂಗಳು ಸಿಗುತ್ತಿಲ್ಲ. ಪ್ರತಿ ವರ್ಷ ಆಷಾಢ ಸಂದರ್ಭದಲ್ಲಿ ಪೂಜಾ ಕಾರ್ಯಗಳು ಕಡಿಮೆ ಇರುವುದರಿಂದ ಕಡಿಮೆ ದರದಲ್ಲಿ ಹೂಗಳು ಮಾರ್ಕೇಟ್‌ನಲ್ಲಿ ದೊರೆಯುತ್ತಿದ್ದವು. ಆದರೆ ಈ ವರ್ಷ ಮುಂಗಾರಿನಿಂದಾಗಿ ಒಂದಕ್ಕಿಂತ ಮೂರು ಪಟ್ಟು ಬೆಲೆ ಜಾಸ್ತಿಯಾಗಿದ್ದು, ಹೂಗಳ ಮುಳ್ಳು ಗ್ರಾಹಕರ ಕೈಗೆ ಚುಚ್ಚುತ್ತಿವೆ.
ಹೌದು, ಮಾರುಕಟ್ಟೆಯಲ್ಲಿ ಹೂಗಳ ದರ ಕೇಲಿದರೆ ಶಾಕ್ ಗ್ಯಾರಂಟಿಯಾಗಿದೆ. ಸದ್ಯ ಮಾರ್ಕೇಟ್‌ನಲ್ಲಿ ಒಂದು ಕೆಜಿ ಮಲ್ಲಿಗೆ ಹೂ 1,200 ರೂ, ಕನಕಾಂಬರ 2,000 ರೂ, ಸೇವಂತಿಗೆ 400 ರೂ, ಚೆಂಡು ಹೂ 200 ರೂ, ಸುಗಂಧರಾಜ 200 ರೂ, ಮಲ್ಲಿಗೆ ಹಾರ (ಒಂದು ಜೊತೆ) 800ರೂ ನಿಂದ 1,000 ರೂಗಳಿಗೆ ಮಾರಾಟವಾಗ್ತಿದೆ. ಅಲ್ಲದೇ ಒಂದ್ಕಡೆ ಮಳ ಕೊರತೆಯಿಂದಾಗಿ ಮತ್ತೊಂದೆಡೆ ಬಿಸಿಲ ತಾಪದಿಂದಾಗಿ ಹೂಗಳು ಬಾಡಿದಂತಾಗಿ ಹೂಗಳ ಫಸಲಿನಲ್ಲಿ ಗಣನೀಯವಾಗಿ ಇಳಿಕೆ ಕಂಡು ಬರುತ್ತಿದೆ. ಇದರಿಂದಾಗಿ ರೈತರು ಕಂಗಾಲಾಗಿದ್ದು, ಜನರು ದಿನನಿತ್ಯದ ಪೂಜೆಗೆ ಹೂಗಳನ್ನು ಖರೀದಿಸಲು ಹಿಂಜರಿಯುತ್ತಿದ್ದಾರೆ. ಮುಂದಿನ ತಿಂಗಳಿಂದ ಶ್ರಾವಣ ಮಾಸದ ಹಬ್ಬಗಳು ಸಾಲು ಸಾಲಾಗಿರುವುದರಿಂದ ಹೂಗಳ ಬೆಲೆ ಇನ್ನಷ್ಟು ಹೆಚ್ಚಾಗಲಿದೆ ಎಂಬುದು ಗ್ರಾಹಕರ ಆತಂಕವಾಗಿದೆ.