ಜಕಾರ್ತಾ: ಇಂಡೋನೇಷ್ಯಾದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನತೆ ತತ್ತರಿಸಿದ್ದಾರೆ. ಭಾರೀ ಮಳೆಗೆ ಇದುವರೆಗೂ ಇಪ್ಪತ್ತಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಕಾರ್ಯಾಚರಣೆ ನಡೆಸಿದೆ.
ನಿರಾಶ್ರಿತರಿಗಾಗಿ ಶಿಬಿರಗಳನ್ನು ತೆರೆಯಲಾಗಿದ್ದು, ಸುರಕ್ಷಿತ ಸ್ಥಳಕ್ಕೆ ಜನರನ್ನು ಸಾಗಿಸಲಾಗುತ್ತಿದೆ. ಭಾರೀ ಮಳೆಗೆ ಫ್ಲೋರೆಸ್ನಲ್ಲಿ ಸುತ್ತಮುತ್ತಲ ಬೆಟ್ಟಗಳಿಂದ ಅಪಾರ ಪ್ರಮಾಣದ ಮಣ್ಣು ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮಳೆಯಿಂದಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು ಸಾರ್ವಜನಿಕರು ಪರದಾಡುವಂತಾಗಿದೆ.
ಕಳೆದ ಎರಡು ದಿನಗಳ ಹಿಂದಷ್ಟೇ ಸುರಿದ ಭಾರೀ ಮಳೆಗೆ ಟೆಮೋರ್ ಪ್ರಾಂತದಲ್ಲಿ ಗುಡ್ಡ ಕುಸಿದು 70ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಟೆಮೋರ್ ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾದ ನಡುವಿರುವ ಪುಟ್ಟ ದ್ವೀಪವಾಗಿದೆ.
ಪ್ರವಾಹ ಮತ್ತು ಭೂಕುಸಿತದಿಂದಾಗಿ ಸಾವಿರಾರು ಮನೆಗಳು ನೆಲಕಚ್ಚಿವೆ. ಪರಿಹಾರ ಕಾರ್ಯಾಚರಣೆ ತಂಡದ ಸಿಬ್ಬಂದಿ ಸಾರ್ವಜನಿಕರನ್ನು ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ.